ಹುಬ್ಬಳ್ಳಿ: ಹರಿಯಾಣದಲ್ಲಿ ಹೋರಾಟ ನಿರತ ರೈತರ ಮೇಲೆ ಗೋಲಿಬಾರ್ ನಡೆಸಿದ ಪೊಲೀಸ್ ಅಧಿಕಾರಿಗೆ ರಾಷ್ಟ್ರಪತಿ ಪುರಸ್ಕಾರಕ್ಕೆ ಹರಿಯಾಣ ಸರ್ಕಾರ ಶಿಫಾರಸ್ಸು ಮಾಡಲು ಮುಂದಾಗಿರುವುದನ್ನು ಕೈ ಬಿಡುವಂತೆ ಒತ್ತಾಯಿಸಿ ವಿವಿಧ ರೈತ ಸಂಘಟನೆಗಳು ಖಂಡನಾ ಪ್ರತಿಭಟನೆ ನಡೆಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿಂದು ಸಭೆ ನಡೆಸಿದ ನಂತರ ಪ್ರತಿಭಟನೆ ನಡೆಸಿದರು. ಹೋರಾಟ ನಿರತ ರೈತರ ಮೇಲೆ ಗೋಲಿಬಾರ್ ನಡೆಸಿದ ಪೊಲೀಸ್ ಅಧಿಕಾರಿಗೆ ಪ್ರಶಸ್ತಿ ನೀಡಲು ಹರಿಯಾಣ ಸರಕಾರ ಮುಂದಾಗಿರುವುದು ರೈತರಿಗೆ ಮಾಡಿದ ಅವಮಾನವಾಗಿದೆ. ಇದು ರೈತ ಹೋರಾಟವನ್ನು ಕುಗ್ಗಿಸುವ ಮನಸ್ಥಿತಿಯಾಗಿದೆ. ಕೂಡಲೇ ಈ ಶಿಫಾರಸ್ಸನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
15ಕ್ಕೆ ರೈತರ ರ್ಯಾಲಿ: ಪ್ರತಿಭಟನೆಗೂ ಮೊದಲ ಸಭೆ ನಡೆಸಿದ ವಿವಿಧ ರೈತ ಸಂಘಟನೆಗಳ ಪ್ರಮುಖರು ದೆಹಲಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ಹೋರಾಟ ಬೆಂಬಲಿಸಿ, ಎಂಎಸ್ಪಿ ಗ್ಯಾರಂಟಿ ಕಾನೂನು ಜಾರಿ, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಮತ್ತು ರೈತರ ಸಂಪೂರ್ಣ ಸಾಲಮನ್ನಕ್ಕಾಗಿ ಒತ್ತಾಯಿಸಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಆ.15 ರಂದು ರೈತರ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು.
ಪ್ರಮುಖರಾದ ಕುರುಬೂರ ಶಾಂತಕುಮಾರ, ವೀರೇಶ ಸೊಬರದಮಠ, ಕರಬಸಪ್ಪಗೌಡ, ದಯಾನಂದ ಪಾಟೀಲ್. ವೀರನಗೌಡ ಪಾಟೀಲ್, ಮಹೇಶ ಬೆಳಗಾಂಕರ್ ಸೇರಿದಂತೆ ಎಂಟು ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ರೈತ ಸಂಘಟನೆಗಳ ಪ್ರಮುಖರಿದ್ದರು