ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣದ ಬಗ್ಗೆ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸುದ್ದಿಗೋಷ್ಠಿ ನಡೆಸಿ ತನಿಖೆಯ ಮಾಹಿತಿ ನೀಡಿದ್ದಾರೆ. ಪೊಲೀಸರು ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕತೆಯಿಂದ ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ಪ್ರಕರಣ ಸತ್ಯತೆಯನ್ನು ಬಯಲು ಮಾಡುವುದಾಗಿ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪೊಲೀಸ್ ಕಮಿಷನರ್ ಬಿ ದಯಾನಂದ್ ಅವರು, ಈವರೆಗೆ 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ರು. ಆರೋಪಿಗಳ ಕೂಲಂಕಷ ವಿಚಾರಣೆ ನಡೆಸಲಾಗ್ತಿದೆ ಇದೆ. ಪ್ರಕರಣದ ತನಿಖೆಯನ್ನ ಎಸಿಪಿ ಮಟ್ಟದ ಅಧಿಕಾರಿಗೆ ನೀಡಲಾಗಿದೆ ಎಂದರು.
ಪ್ರತಿ ವಿಚಾರದ ಬಗ್ಗೆ ಪ್ರತ್ಯೇಕ ತಂಡ ರಚಿಸಿ ತನಿಖೆ ಮಾಡಲಾಗುತ್ತಿದೆ. ತನಿಖಾ ತಂಡದಲ್ಲಿ ಹಲವು ಇನ್ಸ್ಪೆಕ್ಟರ್, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಸಾಕ್ಷಿ ಸಂಗ್ರಹಕ್ಕೆ ಸಹಕರಿಸಲು ಎಫ್ಎಸ್ಎಲ್ ತಜ್ಞರು, ತಾಂತ್ರಿಕ ಪರಿಣತರು ಇದ್ದಾರೆ. ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಪೊಲೀಸರು ನಿಷ್ಪಕ್ಷಪಾತ, ಪ್ರಾಮಾಣಿಕ ತನಿಖೆ ನಡೆಸುತ್ತಿದ್ದಾರೆ ಎಂದು ಕಮಿಷನ್ ದಯಾನಂದ ಹೇಳಿದ್ರು.
ರೇಣುಕಾ ಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಸಾಕ್ಷಿಗಳನ್ನ ಸಂಗ್ರಹಿಸಲಾಗಿದೆ. ಇದೊಂದು ಹೀನ ಕೃತ್ಯವಾಗಿದೆ. ಆರೋಪಿಗಳಿಗೆ ಶಿಕ್ಷೆಯಾಗುವಂತೆ ನಾವು ನೋಡಿಕೊಳ್ಳಬೇಕು, ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದ್ರು. ಅಲ್ಲದೇ ಸಮರ್ಥ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಮಾಧ್ಯಮದವರ ತಾಳ್ಮೆ, ಸಹನೆ ಅಗತ್ಯವಿದೆ. ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಿದೆ. ಕೇಸ್ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಆಗಬೇಕಿದೆ ಇದಕ್ಕೆ ಮಹಜರು, ಸಾಕ್ಷಿಗಳು ಕೂಡ ಮುಖ್ಯವಾಗಿದೆ ಎಂದು ಹೇಳಿದರು.
ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿದಂತೆ ಎಲ್ಲಾ ಕಡೆ ತನಿಖೆ ನಡೆಯುತ್ತಿದೆ. ಚಿತ್ರದುರ್ಗ, ಮೈಸೂರಿನಲ್ಲೂ ಒಂದೊಂದು ತನಿಖಾ ತಂಡ ಇದೆ. ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಎಲ್ಲವನ್ನೂ ಮಾನಿಟರ್ ಮಾಡ್ತಿದ್ದಾರೆ. ಪ್ರತಿ ತಂಡಕ್ಕೆ ಓರ್ವ ಇನ್ಸ್ಪೆಕ್ಟರ್ ನೇತೃತ್ವ ವಹಿಸಿ ತನಿಖೆ ಮಾಡ್ತಿದ್ದಾರೆ. ಕೇಸ್ಗೆ ಸಂಬಂಧಿಸಿದಂತೆ ಈಗಲೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಕಮಿಷನರ್ ದಯಾನಂದ ಹೇಳಿದರು.