ನವದೆಹಲಿ: ಮಾಜಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ಅವರ ಗುತ್ತಿಗೆದಾರರು (Contractors) ಸರಿಯಾಗಿ ಕೆಲಸ ಮಾಡಿದ್ದರೆ ಅವರ ಹಣ ಖಂಡಿತ ಸಿಗುತ್ತದೆ. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಿಲ್ಲ ಎಂದರೆ ಅವರಿಗೆ ಹಣ ಸಿಗುವುದಿಲ್ಲ. ಸದನದಲ್ಲಿ ಅವರೇ ಹೇಳಿದಂತೆ ತನಿಖೆ ಮಾಡಿಸಲಾಗುತ್ತಿದೆ ಎಂದು ಸಂಸದ ಡಿಕೆ ಸುರೇಶ್ (DK Suresh) ತಿರುಗೇಟು ನೀಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಮಾಡಿದ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಉದ್ದೇಶದಿಂದ ಡಿಸಿಎಂ ಹೆಸರು ಪ್ರಸ್ತಾಪ ಮಾಡುತ್ತಿದ್ದಾರೆ. ಕಮಿಷನ್ ಯಾರು ತೆಗೆದುಕೊಂಡರು ಯಾರಿಗೆ ಕೊಟ್ಟರು ಎನ್ನುವುದು ಹೇಳಬೇಕು ಎಂದು ಒತ್ತಾಯಿಸಿದರು.
ವಿಪಕ್ಷಗಳು ಹೇಳಿದಂತೆ ತನಿಖೆಗೆ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ತನಿಖೆ ಮುಗಿದು, ಕಾಮಗಾರಿ ಸರಿಯಾಗಿದ್ದರೆ ಹಣ ಎಲ್ಲೂ ಹೋಗಲ್ಲ. ಹಂತ ಹಂತವಾಗಿ ಬಿಡುಗಡೆ ಆಗಲಿದೆ. ಡಿಕೆ ಶಿವಕುಮಾರ್ ವಿರುದ್ಧದ ಆರೋಪದ ಹಿಂದೆ ರಾಜಕೀಯ ಉದ್ದೇಶ ಇದೆ. ಹೀಗಾಗಿ ನಾವು ರಾಜಕೀಯವಾಗಿ ಉತ್ತರಿಸುತ್ತೇವೆ ಎಂದರು.