ಹುಬ್ಬಳ್ಳಿ: ಸಂಸತ್ ನಲ್ಲಿ ದಾಳಿ ಕೇವಲ ತಿಳಿಗೇಡಿ ಕೃತ್ಯವಲ್ಲ ಬದಲಾಗಿ, ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಷಡ್ಯಂತ್ರವಾಗಿದೆ. ಇಂತಹ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ಈ ಹಿಂದೆ ಪಿಸ್ತೂಲ್ ಮತ್ತು ಡ್ರ್ಯಾಗರ್ ತೆಗೆದುಕೊಂಡು ಸಹ ಪ್ರವೇಶಿಸಿದ್ದರು. ಒಂದೇ ವ್ಯಕ್ತಿ ಎರಡು ದಿನ ಒಂದೇ ಪಾಸ್ ನಲ್ಲಿ ಸಂಸತ್ತಿಗೆ ಪ್ರವೇಶ ಮಾಡಿದ್ದ. ಇದಕ್ಕೆ ಯಾವ ಸಂಸದ ಪಾಸ್ ನೀಡಿದ್ದರು ಎಂಬುದು ಸಹ ಗೊತ್ತಿದೆ. ಆದರೆ ಇದನ್ನು ನಾವು ಮಾತನಾಡಲ್ಲ. ಇದು ಮೋದಿ ಸರ್ಕಾರದಲ್ಲಿ ನಡೆಯುದಿಲ್ಲ. ಇದನ್ನು ರಾಜಕೀಯ ಮಾಡಬಹುದು, ಕಟುವಾಗಿ ಕಾಂಗ್ರೆಸ್ ಟೀಕಿಸಬಹುದು. ಆದರೆ ನಾವು ಅದನ್ನು ಮಾಡಲ್ಲ. ಮುಂದೆ ಇಂತಹ ಘಟನೆ ನಡೆಯದಂತೆ ಕಠಿಣ ಕೈಗೊಳ್ಳಲಾಗುವುದು ಎಂದರು.
ಶೂನ್ಯ ಭಯೋತ್ಪಾದಕತೆ ಮೋದಿ ಸರ್ಕಾರದ ನಿರ್ಧಾರವಾಗಿದೆ. ಈ ಹಿಂದಿನ ಸ್ಪೀಕರ್ ತೆಗೆದುಕೊಂಡ ಕ್ರಮಕ್ಕಿಂತ ಈಗಿನ ಸ್ಪೀಕರ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಈ ತರಹದ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು. ನಾವೆಲ್ಲರೂ ಒಟ್ಟಾಗಿ ಇದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ರಾಜಸ್ಥಾನ ಕಾಂಗ್ರೆಸ್ ನಲ್ಲೂ ಸಹ ಇದೇ ಪರಿಸ್ಥಿತಿ ನಡೆದಿತ್ತು. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಅಲ್ಲೆಲ್ಲ ಈ ರೀತಿಯ ಘಟನೆಗಳು ನಡೆಯುತ್ತಿವೆ. ಬೆಳಗಾವಿ ಘಟನೆ ಕುರಿತು ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕುವ ಕೆಲಸ ಬಿಜೆಪಿಯಿಂದಲೂ ಸಹ ನಡೆಯುತ್ತಿದೆ ಎಂದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಬಿಜೆಪಿ ಶಾಸಕರು ಭಾಗಿಯಾದ ವಿಚಾರವಾಗಿ, ನಾಳೆ ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುತ್ತೇನೆ. ಶಾಸಕರಿಂದ ಏನಾದರೂ ವಿವರಣೆ ಕೇಳಬೇಕೆ ಅಥವಾ ಮುಂದೆ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಪರಿಸ್ಥಿತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಅವರಲ್ಲೇ ಆಂತರಿಕ ಕಚ್ಚಾಟ ನಡೆದಿದೆ. ಈಗ ಇದ್ದವರಿಗೆ ಸಚಿವ ಸ್ಥಾನ ಕೊಡುವುದಕ್ಕೆ ಅವರಿಗೆ ಆಗುವುದಿಲ್ಲ. ನನಗೆ ಮುಖ್ಯಮಂತ್ರಿ ಮಾಡಿಲ್ಲ, ನಿನಗೆ ಸಚಿವ ಮಾಡಿಲ್ಲ, ನಿಗಮ-ಮಂಡಳಿ ಕೊಟ್ಟಿಲ್ಲ ಎಂದು ಜಗಳ ಶುರುವಾಗಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ 20-22 ಲೋಕಸಭಾ ಸ್ಥಾನ ಬರುವುದು ಪಕ್ಷದ ಸಿದ್ಧಾಂತ ಒಪ್ಪದ ಮಾಧ್ಯಮಗಳ ಸಮೀಕ್ಷೆಯಲ್ಲೂ ಬಿಜೆಪಿ ವಾಪಸು ಅಧಿಕಾರಕ್ಕೆ ಬರುವುದು ಪಕ್ಕಾ ಆಗಿದೆ. ರಾಜ್ಯದಲ್ಲಿ ನಾವು 25 ಕ್ಷೇತ್ರ ಗೆದ್ದೆ ಗೆಲ್ಲುತ್ತೇವೆ. ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಡೌನ್ ಫಾಲ್ ಆರಂಭವಾಗಿದೆ. 136 ಶಾಸಕರಿಗೆ ಸ್ಥಾನ ನೀಡಲು ಕಾಂಗ್ರೆಸ್ ಗೆ ಜಾಗ ಮತ್ತು ಸಮಯವೂ ಇಲ್ಲ, ಕಾಂಗ್ರೆಸ್ ಬರುವವರಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸುಮ್ಮನೆ ಹೇಳುತ್ತಾರೆ. ಬೇರೆಯವರನ್ನು ಪಕ್ಷಕ್ಕೆ ಕರೆದು ಕೊಂಡರೆ ನಾವು ಪಕ್ಷದಿಂದ ಹೊರ ಹೋಗುತ್ತೇವೆ ಎಂದು ಕಾಂಗ್ರೆಸ್ ಶಾಸಕರೆ ಹೇಳುತ್ತಿದ್ದಾರೆ. ಅವರು ಯಾರು ಅಂತ ನನಗೆ ಗೊತ್ತು. ಆದರೆ ಅವರ ಹೆಸರು ಹೇಳಲ್ಲ. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಬರುವ ಎಲ್ಲಾ ಚುನಾವಣೆಯಲ್ಲಿ ಸೋಲುತ್ತದೆ ಎಂದು ಭವಿಷ್ಯ ನುಡಿದರು.
ಮಾಜಿ ಸಚಿವ ವಿ.ಸೋಮಣ್ಣ ನನ್ನ ಜೊತೆ ಮಾತನಾಡಿದ್ದಾರೆ. ಸಂಸತ್ತು ಅಧಿವೇಶನ ಮುಗಿದ ಬಳಿಕ ಅವರೊಂದಿಗೆ ಕುಳಿತು ಮಾತನಾಡುತ್ತೇನೆ. ಏನೇ ಸಮಸ್ಯೆ ಇದ್ದರು ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪುಹೆಸರು ನಾಮಕರಣ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಟಿಪ್ಪು, ಔರಂಗಜೇಬ್ ಎಂದು ಕಾಂಗ್ರೆಸ್ ಸೋತಿದೆ. ತುಷ್ಟೀಕರಣ ರಾಜಕೀಯ ಜನ ಸಹಿಸುವುದಿಲ್ಲ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಒಂದು ರಾಜ್ಯ ಬಿಟ್ಟು ಹೀನಾಯ ಸೋಲಿಗೆ ಕಾಂಗ್ರೆಸ್ ತುಷ್ಟೀಕರಣ, ಇಬ್ಬಗೆಯ ನೀತಿ ಕಾರಣ. ಟಿಪ್ಪು ಒಬ್ಬ ಮತಾಂಧ ಎಂದು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಮತಾಂಧ ಹಾಗೂ ಹಿಂದು ವಿರೋಧಿ ಹೆಸರು ವಿಮಾನ ನಿಲ್ದಾಣಕ್ಕೆ ಇಟ್ಟರೆ ಜನ ಅದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದರು.