ರಾಮನಗರ: ರಾಜಕಾರಣ (Politics) ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ. ಹಾಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂಬುದು ನನ್ನ ಉದ್ದೇಶ ಎಂದು ಸಂಸದ ಡಿಕೆ ಸುರೇಶ್ (D.K.Suresh) ವೈರಾಗ್ಯದ ಮಾತುಗಳನ್ನಾಡಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ರಾಮನಗರದಲ್ಲಿ (Ramanagara) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಕಾರ್ಯಕರ್ತರು ಮತ್ತು ಮುಖಂಡರ ಸಲಹೆ ಪಡೆಯಬೇಕು. ಯಾರು ಸೂಕ್ತ ಎಂದು ಅವರು ತೀರ್ಮಾನ ಮಾಡುತ್ತಾರೋ ಅವರಿಗೆ ಬೆಂಬಲ ಕೊಡುತ್ತೇನೆ ಎಂದರು. ಸಂಸದರ ಬಗ್ಗೆ ಹೆಚ್ಡಿಕೆ (H.D.Kumaraswamy) ವ್ಯಂಗ್ಯ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವರಿಗೆ ವ್ಯಂಗ್ಯ ಬಿಟ್ಟು ಬೇರೆ ಏನೂ ಬರುವುದಿಲ್ಲ, ವ್ಯಂಗ್ಯ ಮಾಡಲಿ. ಅಧಿಕಾರದ ದಾಹ ಇದ್ದವರಿಗೆ ರಾಜಕಾರಣ ಬೇಕು. ನನಗಿರುವುದು ಅಭಿವೃದ್ಧಿಯ ದಾಹ. ಇನ್ನೂ ಒಂದು ವರ್ಷ ಸಮಯವಿದೆ. ನಾನು ಅಭಿವೃದ್ಧಿಯ ಕಡೆ ಗಮನ ಕೊಡುತ್ತೇನೆ ಎಂದು ಹೇಳಿದರು.
ಡಿಕೆ ಸುರೇಶ್ ಸೋಲಿಸಲು ಬಿಜೆಪಿ (BJP)-ಜೆಡಿಎಸ್ (JDS) ಹೊಂದಾಣಿಕೆ ಕುರಿತು ಮಾತನಾಡಿದ ಅವರು, ಅವರು ಹೊಂದಾಣಿಕೆ ಮಾಡಿಕೊಳ್ಳಲಿ. ಯಾರು ಬೇಕಾದರೂ ನಿಲ್ಲಲಿ. ನನಗಿರುವುದೂ ಒಂದೇ ಮತ, ಪ್ರಧಾನಿಗಿರೋದು ಒಂದೇ ಮತ. ಆ ಮತವನ್ನು ಯಾರಿಗೆ ಹಾಕಬೇಕು ಎಂದು ಜನರು ತೀರ್ಮಾನ ಮಾಡುತ್ತಾರೆ ಎಂದರು.