ರಾಮನಗರ: ರಾಜ್ಯ ಕಾಂಗ್ರೆಸ್ ಸರ್ಕಾರವು ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂಬ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ ಮತ್ತೊಂದು ಹೊಸ ‘ಬಾಂಬ್’ ಹಾಕಿದ್ದಾರೆ. ‘ಕಳೆದ ಎರಡು ತಿಂಗಳಿಂದ ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಅವಧಿಯಲ್ಲಿ ಕಾಸಿಗಾಗಿ ಹುದ್ದೆ ವ್ಯವಹಾರದಲ್ಲಿ 500 ಕೋಟಿ ರು.ಗಿಂತ ಹೆಚ್ಚು ಹಣ ಕೈ ಬದಲಾಗಿದೆ’ ಎಂಬ ಮಾಹಿತಿ ಇದೆ ಎಂದು ಅವರು ಆಪಾದಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವರ್ಗಾವರ್ಗಿ ದಂಧೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾಹಿತಿ ಇದೆ. ಆ ಬಗ್ಗೆ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ಕರ್ನಾಟಕದಲ್ಲಿ ಮೇವು ಸಮೃದ್ಧವಾಗಿದೆ. ಇಲ್ಲಿ ಚೆನ್ನಾಗಿ, ಪೊಗದಸ್ತಾಗಿ ಮೇಯುತ್ತಿದ್ದಾರೆ. ಆ ಮೇವನ್ನು ಇಡೀ ದೇಶಕ್ಕೆಲ್ಲಾ ಹಂಚಲು ಹೊರಟ್ಟಿದ್ದಾರೆ. ಇದೇನಾ ಕರ್ನಾಟಕ ಮಾದರಿ ಎಂದರೆ? ಇದೇನಾ ಹೊಸ ಭರವಸೆ, ಹೊಸ ಕನಸು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ನಡೆಯುತ್ತಿರುವ ಯೋಜನೆಗಳ ಕಾಮಗಾರಿಗಳ ಒಟ್ಟು ಅಂದಾಜು ವೆಚ್ಚವನ್ನು ಶೇ.20-30ರಷ್ಟುಹೆಚ್ಚಳ ಮಾಡಿಕೊಳ್ಳಲಾಗುತ್ತಿದೆ. ಕಮಿಷನ್ ಹೊಡೆಯೋದಕ್ಕೆ ಏನು ಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆಯಲ್ಲಿಯೇ 130 ಕೋಟಿ ರು. ಅವ್ಯವಹಾರ ನಡೆದಿದೆ. ಅಧಿಕಾರಿಯೊಬ್ಬರು ವರ್ಗಾವಣೆ ದಂಧೆಯಲ್ಲಿ ಆಗಿರುವ ವ್ಯವಹಾರದ ಮೊತ್ತದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು. ನನ್ನ ವಿಚಾರದಲ್ಲಿ ಒಂದೇ ಒಂದು ವರ್ಗಾವಣೆ ಪ್ರಕರಣ ತೋರಿಸಿ ಸಾಬೀತು ಮಾಡಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ.
ಅಂತಹ ಮಾತು ಹೇಳುವ ಧೈರ್ಯ ಇವರಿಗೆ ಇದೆಯಾ? ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹೇಗೆಲ್ಲಾ ಮೇಯುತ್ತಿದ್ದಾರೆ ಎಂಬುದು ಎಲ್ಲರಿಗೂ ಚೆನ್ನಾಗಿ ಅರ್ಥವಾಗುತ್ತಿದೆ. ಅಧಿಕಾರಿಯೊಬ್ಬರು ನನ್ನನ್ನು ಭೇಟಿಯಾಗಿದ್ದಾಗ ವರ್ಗಾವಣೆ ದಂಧೆಯ ಬಗ್ಗೆ ಹೇಳಿದ್ದು, ಈವರೆಗೆ ಕಡಿಮೆ ಎಂದರೂ 500 ಕೋಟಿ ರು.ಗಿಂತ ಹೆಚ್ಚು ವ್ಯವಹಾರ ನಡೆದಿದೆ. ಸರ್ಕಾರದಿಂದ ವರ್ಗಾವಣೆ ಕಿರುಕುಳಕ್ಕೊಳಗಾಗಿರುವ ಅಧಿಕಾರಿಗಳು ಸುಳ್ಳು ಹೇಳುತ್ತಾರೆಯೇ? ಇದಕ್ಕೆಲ್ಲಾ ಸಾಕ್ಷಿ ಸಂಗ್ರಹ ಮಾಡಲು ಸಾಧ್ಯವೇ? ಈ ರೀತಿಯಾದರೆ ರಾಜ್ಯ ಉಳಿಯುತ್ತಾ ಎಂದು ಕುಮಾರಸ್ವಾಮಿ ಕಿಡಿಕಾರಿದರು.