ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಐಎನ್ಡಿಐಎ ಮೈತ್ರಿಕೂಟವು ಬಹಮತ ಪಡೆಯುವತ್ತ ಮುನ್ನಡೆಯುತ್ತಿದೆ ಎನ್ನುವುದನ್ನು ಗ್ರಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹತಾಶರಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಛತ್ತೀಸ್ಗಢದ ಜಂಗ್ಜೀರ್- ಚಂಪಾ ಜಿಲ್ಲೆಯಲ್ಲಿ ಚುನಾವಣಾ ರಾಲಿಯಲ್ಲಿ ಮಾತನಾಡಿದ ಖರ್ಗೆ, ಸೋಲುವ ಭಯದ ಕಾರಣದಿಂದಲೇ ಮೋದಿ ಅವರು ಮಂಗಳಸೂತ್ರ ಮತ್ತು ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.”ನಾವು ಬಹುಮತದ ಕಡೆಗೆ ಮುನ್ನುಗ್ಗುತ್ತಿದ್ದೇವೆ. ಹೀಗಾಗಿಯೇ ಅವರು (ಪ್ರಧಾನಿ ನರೇಂದ್ರ ಮೋದಿ) ಈಗ ಮಂಗಳಸೂತ್ರ ಮತ್ತು ಮುಸ್ಲಿಮರ ಕುರಿತು ಮಾತನಾಡುತ್ತಿದ್ದಾರೆ. ನಾವು ನಿಮ್ಮ ಸಂಪತ್ತನ್ನು ಕಸಿಯುತ್ತೇವೆ ಮತ್ತು ಅವುಗಳನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚುತ್ತೇವೆ ಎಂದು ಅವರು ಹೇಳುತ್ತಿದ್ದಾರೆ. ಬಡ ಜನರು ಯಾವಾಗಲೂ ಹೆಚ್ಚು ಮಕ್ಕಳನ್ನು ಹೆರುತ್ತಾರೆ. ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೆರುತ್ತಾರೆಯೇ? ನನಗೂ ಐದು ಮಕ್ಕಳಿದ್ದಾರೆ” ಎಂದು ಹೇಳಿದರು.