ಕೊರಿಯಾದಲ್ಲಿ ಮಸೀದಿಯನ್ನು ನಿರ್ಮಿಸಲು ಮುಂದಾದ ಪಾಪ್ ತಾರೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ದಕ್ಷಿಣ ಕೊರಿಯಾದ ಯೂಟ್ಯೂಬರ್ ಮತ್ತು ಮಾಜಿ ಕೋರಿಯನ್ ಪಾಪ್ ತಾರೆ ದೌಡ್ ಕಿಮ್ ಇಂಚಿಯಾನ್ನಲ್ಲಿ ಮಸೀದಿ ನಿರ್ಮಿಸುವ ಪ್ರಯತ್ನಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
2020ರಲ್ಲಿ ಇಸ್ಲಾಂಗೆ ಮತಾಂತರಗೊಂಡ ಬಳಿಕ ತನ್ನ ಹೆಸರನ್ನು ದೌಡ್ ಕಿಮ್ ಎಂದು ಬದಲಾಯಿಸಿಕೊಂಡಿರುವ ಜೇ ಕಿಮ್ ಎರಡನೇ ಭಾರಿ ಮಸೀದಿ ನಿರ್ಮಿಸಲು ಪ್ರಯತ್ನಿಸಿದರು. ಸದ್ಯ ಅವರ ಮಸೀದಿಯನ್ನು ನಿರ್ಮಿಸುವ ಪ್ರಯತ್ನವು ಸ್ಥಳೀಯರಿಂದ ಪ್ರತಿರೋಧ ಮತ್ತು ವಂಚನೆಯ ಆರೋಪಗಳನ್ನು ಎದುರಿಸುತ್ತಿದೆ.
5.55 ಮಿಲಿಯನ್ ಯೂಟ್ಯೂಬ್ ಚಂದಾದಾರರನ್ನು ಹೊಂದಿರುವ ದೌಡ್ ಕಿಮ್ ದಕ್ಷಿಣ ಕೊರಿಯಾದಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ಹೆಚ್ಚಿನ ಸ್ಥಳಗಳನ್ನು ನಿರ್ಮಿಸಲು ಬಯಸಿರುವುದಾಗಿ Instagram ನಲ್ಲಿ ಹಂಚಿಕೊಂಡಿದ್ದಾರೆ.
ಮಸೀದಿ ನಿರ್ಮಾಣ ಮಾಡಬೇಕೆಂದ ಉದ್ದೇಶದಿಂದ ಪಾಪ್ ತಾರೆ ದೌಡ್ ಕಿಮ್ ಇಂಚೆನ್ನ ಯೊಂಗ್ಜಾಂಗ್ ದ್ವೀಪದಲ್ಲಿ 284.4 ಚದರ ಮೀಟರ್ ಭೂಮಿಯನ್ನು 189.2 ಮಿಲಿಯನ್ ವೋನ್ಗಳಿಗೆ ($136,500) ಖರೀದಿ ಮಾಡಿದ್ದರು. ಆದರೆ ಸಿಯೋಲ್ ಕ್ಯಾಪಿಟಲ್ ಏರಿಯಾದ ಭಾಗವಾಗಿರುವ ಇಂಚಿಯಾನ್ನಲ್ಲಿ ಮಸೀದಿಯನ್ನು ನಿರ್ಮಿಸುವ ದೌಡ್ ಕಿಮ್ ಅವರ ಮಹತ್ವಾಕಾಂಕ್ಷೆಯ ಯೋಜನೆಯು ಭೂ ಒಪ್ಪಂದದ ಮುಕ್ತಾಯ, ಆಡಳಿತಾತ್ಮಕ ರಸ್ತೆ ತಡೆಗಳು, ವಂಚನೆಯ ಆರೋಪಗಳು ಮತ್ತು ಸ್ಥಳೀಯರಿಂದ ಪ್ರತಿರೋಧ ಸೇರಿದಂತೆ ಅನೇಕ ಅಡಚಣೆಗಳನ್ನು ಎದುರಿಸುತ್ತಿದೆ.
ಪಾಪ್ ತಾರೆ ದೌಡ್ ಕಿಮ್ ತಮ್ಮ ಬ್ಯಾಂಕ್ ಮಾಹಿತಿಯನ್ನು ಆನ್ಲೈನ್ನಲ್ಲಿ ಹಂಚಿಕೊಂಡಿದ್ದು, ಮಸೀದಿ ನಿರ್ಮಾಣ ಮಾಡಲು ಹಣವನ್ನು ದಾನ ನೀಡುವಂತೆಯೂ ಮನವಿ ಮಾಡಿದ್ದರು. ತಮ್ಮ ಯೂಟ್ಯೂಬ್ ಚಂದಾದಾರರ ಬಳಿ ದಾನ ಮಾಡುವಂತೆ ಕೋರಿಕೆ ಸಲ್ಲಿಸಿದ್ದರು. ಆದರೆ ಶಾಲೆಗಳು ಮತ್ತು ವಸತಿ ಪ್ರದೇಶಗಳ ಬಳಿ ಇರುವ ಮಸೀದಿಯನ್ನು ನಿರ್ಮಿಸುವುದನ್ನು ಸ್ಥಳೀಯ ಸಮುದಾಯವು ವಿರೋಧಿಸಿದೆ.
2015 ರ ಜನಗಣತಿಯ ಮಾಹಿತಿಯ ಪ್ರಕಾರ ದಕ್ಷಿಣ ಕೊರಿಯಾದ 5 ಕೋಟಿ ಜನಸಂಖ್ಯೆಯಲ್ಲಿ, ಸುಮಾರು 56% ಜನರು ನಾಸ್ತಿಕರು, ಪ್ರೊಟೆಸ್ಟೆಂಟ್ಗಳು 19%, ನಂತರ ಕೊರಿಯನ್ ಬೌದ್ಧರು (15.5%) ಮತ್ತು ಕ್ಯಾಥೋಲಿಕರು (8%) ವಾಸವಿದ್ದಾರೆ.
ದಕ್ಷಿಣ ಕೊರಿಯಾವು ಸರಿಸುಮಾರು 1,50,000 ಮುಸ್ಲಿಮರಿಗೆ ನೆಲೆ ಒದಗಿಸಿದೆ. ಅವರಲ್ಲಿ ಸುಮಾರು 1,20,000 ಕಾರ್ಮಿಕರಾಗಿದ್ದು, 30,000 ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರಾಗಿದ್ದಾರೆ. ಪ್ರಾಥಮಿಕವಾಗಿ ಉಜ್ಬೇಕಿಸ್ತಾನ್, ಬಾಂಗ್ಲಾದೇಶ, ಇಂಡೋನೇಷ್ಯಾ ಮತ್ತು ಪಾಕಿಸ್ತಾನದಿಂದ ವಲಸೆ ಬಂದಿದ್ದಾರೆ. ಹೀಗಾಗಿ ಅಲ್ಲಿರುವ ಮುಸ್ಲೀಮರಿಗೆ ಪ್ರಾರ್ಥನೆ ಸಲ್ಲಿಸಲು ಮಸೀದಿ ನಿರ್ಮಿಸಬೇಕು ಎಂದಿರುವ ದೌಡ್ ಕಿಮ್ ಪ್ರಯತ್ನ ವಿಫಲವಾಗಿದೆ.