ಚಂಡೀಗಢ: ಶನಿವಾರ ಇಲ್ಲಿನ ಮಹರಾಜ ಯದವೀರ ಸಿಂಗ್ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಣ ಪಂದ್ಯದಲ್ಲಿ ಯುವ ಬ್ಯಾಟರ್ ಅಭಿಷೇಕ್ ಪೊರೆಲ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಈ ಪಂದ್ದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.3 ಓವರ್ನಲ್ಲಿ 147 ರನ್ಗಳನ್ನು ಗಳಿಸಿತ್ತು. ಆದರೆ, ಕೊನೆಯ ಓವರ್ನಲ್ಲಿ ಅಭಿಷೇಕ್ ಪೊರೆಲ್ ಪಂದ್ಯದ ಚಿತ್ರಣವನ್ನು ಬದಲಿಸಿದರು. 20ನೇ ಓವರ್ನಲ್ಲಿ ಹರ್ಷಲ್ ಪಟೇಲ್ಗೆ ಬರೋಬ್ಬರಿ 25 ರನ್ಗಳನ್ನು ಯುವ ಬ್ಯಾಟ್ಸ್ಮನ್ ಸಿಡಿಸಿದರು. ಅಂದ ಹಾಗೆ ಎದುರಿಸಿದ ಕೇವಲ 10 ಎಸೆತಗಳಲ್ಲಿಯೇ ಡೆಲ್ಲಿ ಬ್ಯಾಟರ್ ಅಜೇಯ 32 ರನ್ಗಳನ್ನು ಗಳಿಸಿದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 174 ರನ್ ಗಳಿಸಲು ನೆರವು ನೀಡಿದರು.
ಅಭಿಷೇಕ್ ಪೊರೆಲ್ ಅವರು 2002ರ ಅಕ್ಟೋಬರ್ 17 ರಂದು ಪಶ್ಚಿಮ ಬಂಗಾಳದ ಚಂದನ್ ನಗರದಲ್ಲಿ ಜನಿಸಿದ್ದರು. ಪೊರೆಲ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಬಂಗಾಳ ಕಿರಿಯರ ತಂಡದಲ್ಲಿ ಪ್ರಾರಂಭಿಸಿದ್ದರು. ಇವರ ಹಿರಿಯ ಸಹೋದರ ಇಶಾನ್ ಪೊರೆಲ್ ಕೂಡ 2021ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಐಪಿಎಲ್ ಟೂರ್ನಿಯಲ್ಲಿ ಆಡಿದ್ದರು.
ಅಭಿಷೇಕ್ ತಮ್ಮ ಎಡಗೈ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಕೂಡ ಆಗಿದ್ದಾರೆ. 2022ರಲ್ಲಿ ಅವರು ಬಂಗಾಳ ಹಿರಿಯರ ತಂಡದ ಪರ ಆಡಿದ್ದರು ಮತ್ತು 2021-2022ರ ರಣಜಿ ಋತುವಿನಲ್ಲಿ ಬರೋಡಾ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು