ಧಾರವಾಡ: ಧಾರವಾಡ ಐಐಟಿ (IIT Dharwad) ಉದ್ಘಾಟನೆ ಮಾ.11ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇದೇ ವೇಳೆ ಹಲವು ಕಾಮಗಾರಿಗೆ ಅವರು ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಧಾರವಾಡದಲ್ಲಿ ಮಹದಾಯಿ ಯೋಜನೆ (Mahadayi Project) ವಿಚಾರವಾಗಿ ಮಾತನಾಡಿದ ಅವರು, ಮೋದಿ ಸರ್ಕಾರ ಮತ್ತೊಮ್ಮೆ ರಾಜ್ಯಕ್ಕೆ ಕೊಡುಗೆ ಕೊಟ್ಟಿದೆ. ಈ ಹಿಂದೆ ರಾಜ್ಯಕ್ಕೆ ಹನಿ ನೀರು ಕೊಡಲ್ಲವೆಂದು ಕಾಂಗ್ರೆಸ್ ಹೇಳಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 3 ರಾಜ್ಯಗಳಿಗೂ ಹೆಚ್ಚು ನೀರು ಹೋಗಬಾರದು ಅಂತಾ ನಿರ್ವಹಣಾ ಪ್ರಾಧಿಕಾರ ರಚನೆ ಮಾಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಹದಾಯಿ ನೀರು ಹಂಚಿಕೆಯಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷ ಹೆಚ್ಚು ಕಾಲ ಆಡಳಿತದಲ್ಲಿದ್ದರೂ ಏನೂ ಕೆಲಸ ಮಾಡಿಲ್ಲ, ಅವರು ಸದಾ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿದ್ದಾರೆ. ಇಂದು ಅಭಿವೃದ್ಧಿ ಕಾರ್ಯ ನೋಡಿ ಜನರು ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳದೇ ಕಾಂಗ್ರೆಸ್‌ನವರು ನಾಟಕ ಮಾಡುತ್ತಿದ್ದಾರೆ ಎಂದರು. ಮದ್ಯಪಾನ ವಯೋಮಿತಿಯನ್ನು ಕಡಿಮೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೇಳಿದ್ದೇನೆ. ಆದರೆ ಈ ಬಗ್ಗೆ ಪ್ರಸ್ತಾವನೆ ಇಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
ಅಧಿಕಾರಕ್ಕೆ ಬಂದರೆ ಉಚಿತವಾಗಿ 10 ಕೆಜಿ ಅಕ್ಕಿ ನೀಡುವ ಘೋಷಣೆ ಮಾಡಿದ ಬಗ್ಗೆ ಕಾಂಗ್ರೆಸ್ಗೆ ಟಾಂಗ್ ಕೊಟ್ಟ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಪಕ್ಷ ಇಷ್ಟು ವರ್ಷಗಳ ಕಾಲ ಕತ್ತೆ ಕಾಯ್ತಾ ಇತ್ತಾ? ನಾವು ಈಗಾಗಲೇ ಉಚಿತವಾಗಿ 5 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ನಾವು 10 ಕೆಜಿ ಕೊಟ್ಟರೆ ಕಾಂಗ್ರೆಸ್ನವರು 20 ಕೆಜಿ ಅಂತಾರೆ. ಕಾಂಗ್ರೆಸ್‌ನವರು ಹೇಳಿದ್ದನ್ನು ಯಾವುದಾದರೂ ಮಾಡಿದ್ದಾರಾ ಇದೇ ಕಾಂಗ್ರೆಸ್ನವರು ಮೊದಲು ಗರೀಬಿ ಹಠಾವೋ ಅಂದರು. ಅದೆಲ್ಲ ಆಗಿದ್ದರೆ ಇವತ್ತೇಕೆ ಮತ್ತೆ ಅಕ್ಕಿ ಕೊಡುವ ಸ್ಥಿತಿ ಬರುತ್ತಿತ್ತು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸುಳ್ಳು ಹೇಳಲು ಅತ್ಯಂತ ನಿಸ್ಸೀಮವಾಗಿರುವ ಪಕ್ಷ. ದೇಶದಲ್ಲಿ ಕಾಂಗ್ರೆಸ್ನವರು 57-58 ವರ್ಷ ಆಡಳಿತ ಮಾಡಿದ್ದಾರೆ. ಈಗಲೂ ವಿದ್ಯುತ್ ಕೊಡುತ್ತೇವೆ ಅಂತಾ ಕಾಂಗ್ರೆಸ್ ಹೇಳುತ್ತದೆ. ಈಗ ನಾವು 24 ಗಂಟೆಗಳ ಕಾಲ ವಿದ್ಯುತ್ ಕೊಡುತ್ತಿದ್ದೇವೆ. ಕಾಂಗ್ರೆಸ್ನವರು ಈಗ ಉಚಿತ ವಿದ್ಯುತ್ ಕೊಡುತ್ತೇವೆ ಅಂತಾರೆ. ಇಷ್ಟು ದಿನ ಕಾಂಗ್ರೆಸ್‌ನವರು ಕತ್ತೆ ಕಾಯ್ತಾ ಇದ್ರಾ? 75 ವರ್ಷದಲ್ಲಿ 58 ವರ್ಷ ಅಧಿಕಾರದಲ್ಲಿದ್ದರಲ್ಲ, ನಿಮಗೆ ನಾಚಿಕೆ ಆಗುವುದಿಲ್ವಾ? ಸುಳ್ಳು ಹೇಳುವುದು ಕಾಂಗ್ರೆಸ್‌ನವರ ಡಿಎನ್‌ಎನಲ್ಲೇ ಇದೆ ಎಂದು ವಾಗ್ದಾಳಿ ನಡೆಸಿದರು.