ಹಾಸನದ ಹಾಲಿ ಎಂಪಿ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಸಿನಿಮಾ ತಾರೆಯರು ಸೇರಿದಂತೆ ಹಲವರು ಪ್ರಜ್ವಲ್ ರೇವಣ್ಣ ವಿರುದ್ಧ ಕಿಡಿಕಾರಿದ್ದು ಇದೀಗ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಆಕ್ರೋಶ ಹೊರ ಹಾಕಿದ್ದಾರೆ.
ಹಾಸನ ಎಂಪಿ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನಲಾದ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ವಿವಾದ ಭುಗಿಲೆದ್ದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣ ವಿವಾದ ಭುಗಿಲೇಳುತ್ತಿದ್ದಂತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೂಡ ಎಕ್ಸ್ ಖಾತೆಯ ಮೂಲಕ ಕಿಡಿ ಕಾರಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು, ಅಪರಾಧಿ ಮುಸ್ಲಿಂ, ಟಿಎಂಸಿ ಇಲ್ಲವೇ ಕಾಂಗ್ರೆಸ್ನವರು ಆಗಿದ್ದರೆ ಮಾತ್ರ ಮಹಿಳಾ ಸುರಕ್ಷತೆ ಬಗ್ಗೆ ಕಾಳಜಿ ವಹಿಸುತ್ತಾರೆಂದು ಆಕ್ರೋಶ ಹೊರ ಹಾಕಿದ್ದಾರೆ.
“ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಅಪರಾಧದ ಬಗ್ಗೆ ಮೋದಿ ನಾಯಕತ್ವದ ಸರ್ಕಾರ ಸೈಲೆಂಟ್ ಆಗಿದ್ದಕ್ಕೆ ನಾವೇಕೆ ಶಾಕ್ ಆಗಿದ್ದೇವೆ? ಎಲ್ಲಾ ಗೊತ್ತಿದ್ದರೂ ಮೋದಿ ಅವನ ಪರ ಪ್ರಚಾರ ಮಾಡಿದ್ದಕ್ಕೆ ನಾವೇಕೆ ಶಾಕ್ ಆಗಿದ್ದೇವೆ? ಕಥುವಾ, ಉನ್ನಾವೋ, ಹತ್ರಾಸ್, ಕುಲ್ದೀಪ್ ಸೆಂಗರ್, ಬ್ರಿಜ್ಭೂಷಣ್ ಶರಣ್ ಹಾಗೂ ಇತರೆ ಬಗ್ಗೆ ಉದಾಹರಣೆ ನಮ್ಮ ಮುಂದೆ ಇದೆ. ಅಪರಾಧಿ ಮುಸ್ಲಿಂ ಅಥವಾ ಟಿಎಂಸಿ/ಕಾಂಗ್ರೆಸ್ನವರಾಗಿದ್ದರೆ ಮಾತ್ರ ಅವರು ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಾರೆ.” ಎಂದು ಬಾಲಿವುಡ್ ಸ್ವರಾ ಭಾಸ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.