ಬೆಂಗಳೂರು/ನವದೆಹಲಿ: ನಮ್ಮ ದೇಶವನ್ನು ಉಳಿಸಲು ಈ ದಬ್ಬಾಳಿಕೆಯಿಂದ ಬಯಸುವ ಪ್ರತಿಯೊಬ್ಬರ ಮನೆಯೂ ನಿಮ್ಮ ಮನೆ, ನಿಮಗೆ ಎಂದೆಂದಿಗೂ ಆತ್ಮೀಯ ಸ್ವಾಗತ ಎಂದು ಹೇಳುವ ಮೂಲಕ ಹಿರಿಯ ನಟ ಪ್ರಕಾಶ್ ರಾಜ್ (Prakash Raj), ರಾಹುಲ್ ಗಾಂಧಿ (Rahul Gandhi) ಅವರನ್ನು ಬೆಂಬಲಿಸಿದ್ದಾರೆ.
ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಲೋಕಸಭೆಯ ಕಾರ್ಯದರ್ಶಿ ಮೋಹಿತ್ ರಾಜನ್ ಸಂಸದರ ಅಧಿಕೃತ ನಿವಾಸ ಖಾಲಿ ಮಾಡುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿ ಪತ್ರ ಬರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ನಾನು ಇಲ್ಲಿ ಸಂತೋಷದ ಸಮಯ ಕಳೆದಿದ್ದೇನೆ, ಅದರ ನೆನಪುಗಳಿವೆ. ಜನರ ಆದೇಶಕ್ಕೆ ಋಣಿಯಾಗಿರುವುದಾಗಿ ಹೇಳಿದ್ದಾರೆ. ನನ್ನ ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ನಾನು ಖಂಡಿತವಾಗಿಯೂ ನಿಮ್ಮ ಪತ್ರದಲ್ಲಿರುವ ವಿವರಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದರು.
ಈ ಕುರಿತು #justasking ಹ್ಯಾಶ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್, ʻಪ್ರೀತಿಯ ರಾಹುಲ್ ಗಾಂಧಿ, ದಬ್ಬಾಳಿಕೆಯಿಂದ ನಮ್ಮ ದೇಶವನ್ನು ಉಳಿಸಲು ಬಯಸುವ ಪ್ರತಿಯೊಬ್ಬರ ಮನೆಯೂ ನಿಮ್ಮ ಮನೆ, ಇಡೀ ಭಾರತವೇ ನಿಮ್ಮ ಮನೆ, ಚಿಂತೆಬೇಡ ನಿಮಗೆ ಆತ್ಮೀಯ ಸ್ವಾಗತ, ಇದುವೆ ನಿಮಗೆ ಹೆಚ್ಚಿನ ಶಕ್ತಿʼಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ರಾಹುಲ್ ಗಾಂಧಿ ಅವರು ಲೋಕಸಭಾ ಕಾರ್ಯದರ್ಶಿಗಳಿಗೆ ಬರೆದ ಪತ್ರವನ್ನೂ ಸಹ ಹಂಚಿಕೊಂಡಿದ್ದಾರೆ.