ಶಿರಸಿ: ಛತ್ರಪತಿ ಶಿವಾಜಿ ಮಹಾರಾಜರ ವಿಚಾರ ಇಂದಿಗೂ ಪ್ರಸ್ತುತವಿದೆ. ಭಾರತದ ಗಡಿ ಸುತ್ತಲೂ ಇಸ್ಲಾಮೀಕರಣದ ವಾತಾವರಣ ಹೆಚ್ಚುತ್ತಿದೆ. ಶಿವಾಜಿ ಮಹಾರಾಜರ ಮಾದರಿಯಲ್ಲಿ ಮತಾಂಧರನ್ನು ಎದುರಿಸಬೇಕಿದೆ. ಇಂದು ಮನೆ ಮನೆಯಲ್ಲಿ ಜೀಜಾಮಾತೆಯ ಅವಶ್ಯಕತೆಯಿದೆ. ರಾಷ್ಟ್ರಕ್ಕಾಗಿ, ಧರ್ಮಕ್ಕಾಗಿ, ಸಂಸ್ಕೃತಿಗಾಗಿ ಮನೆಯ ಮಕ್ಕಳನ್ನು ಹೋರಾಡಲು ಸಜ್ಜುಗೊಳಿಸುವ ಜೀಜಾಮಾತೆಯರು ಪ್ರತಿ ಮನೆಯಿಂದ ಬರಬೇಕಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು
ನಗರದಲ್ಲಿಅಖಿಲ ಭಾರತ ಹಿಂದೂ ಮಹಾಸಭಾದಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿಅವರು ಮಾತನಾಡಿದರು.
ಕಾಂಗ್ರೆಸ್ನಿಂದ ದೇಶ ಹಾಳು
ರಾಷ್ಟ್ರೀಯ ಸ್ವಯಂಸೇವಕ ಸಂಘ ಕೊಟ್ಟ ಸಂಸ್ಕಾರ ಎಂದಿಗೂ ನನ್ನನ್ನು ಹಿಂದೆ ಸರಿಯುವಂತೆ ಮಾಡುವುದಿಲ್ಲ. ಹಿಂದೂ ಸಮಾಜಕ್ಕಾಗಿ ನಿಸ್ವಾರ್ಥದಿಂದ ಬದುಕುತ್ತಿದ್ದೇನೆ. ದೇಶ ಆಳಿದ ಕಾಂಗ್ರೆಸ್ ಅಪ್ಜಲ್ ಖಾನ್, ಟಿಪ್ಪು ಸುಲ್ತಾನನ ಸಂತತಿಯಾಗಿದೆ. ಕಾಂಗ್ರೆಸ್ ದೇಶವನ್ನು ಬರ್ಬಾದ್ ಮಾಡಿದೆ. ಕಾಶ್ಮೀರದಲ್ಲಿಈಗಲೂ ಹಿಂದೂಗಳ ಹತ್ಯೆಯಾಗುತ್ತಿದೆ. ಹಿಂದೂಗಳನ್ನು ಸಂರಕ್ಷಿಸುವ ಕಾರ್ಯ ಎಲ್ಲರಿಂದ ನಡೆಯಬೇಕು ಎಂದರು. ಹಿಂದೂಗಳ ಹೆಸರಿನಲ್ಲಿ ಗೆದ್ದು, ಗೋಮಾತೆಯ ಹತ್ಯೆ ಖಂಡಿಸದ, ಭ್ರಷ್ಟಾಚಾರ ವಿರೋಧಿಸದ ಜನಪ್ರತಿನಿಧಿಗಳನ್ನು ಐದಾರು ಬಾರಿ ಶಾಸಕ-ಸಂಸದರನ್ನಾಗಿ ಆರಿಸುತ್ತಿರುವುದು ದೌರ್ಭಾಗ್ಯದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಅತಿಕ್ರಮಣ ಎದುರಿಸಿ
ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಮಲೇಶದಾಸ್ ಮಹಾರಾಜ್ ಮಾತನಾಡಿ, ಭಾರತ ವ್ಯಾಪಾರದ ದೇಶವಲ್ಲ, ಬದಲಾಗಿ ಪರಿವಾರದ ದೇಶವಾಗಿದೆ. ದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅತಿಕ್ರಮಣವನ್ನು ನಾವೆಲ್ಲ ಜಾಗೃತಗೊಳ್ಳುವುದರ ಮೂಲಕ ಎದುರಿಸಬೇಕಿದೆ ಎಂದರು.
ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿ, ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು. ಇಂದು ಹಿಂದೂಗಳ ಶಕ್ತಿಯನ್ನು ದಮನಗೊಳಿಸುವ ಕೆಲಸ ನಡೆಯುತ್ತಿದೆ. ಆಚಾರ್ಯ ಚಾಣಾಕ್ಯನ ಮಾತಿನಂತೆ ಅತ್ಯಾಚಾರ, ಅನಾಚಾರವನ್ನು ವಿರೋಧಿಸದ ಸಜ್ಜನರ ನಿಷ್ಕ್ರಿಯತೆ ದೇಶಕ್ಕೆ ಹೆಚ್ಚು ಮಾರಕ ಎಂದರು.
ಇದೇ ವೇಳೆ ವೇದಿಕೆಯಲ್ಲಿ ವಿಠ್ಠಲ್ ಪೈ ಅವರನ್ನು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಕಾರ್ಯದರ್ಶಿಯಾಗಿ ಘೋಷಿಸಲಾಯಿತು.
ವೇದಿಕೆಯಲ್ಲಿ ತೆಲಂಗಾಣ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಆತ್ಮಾರಾಮ್ ರಾಮದಾಸ್ ಜೀ, ಛತ್ರಪತಿ ಯುವಸೇನಾ ಅಧ್ಯಕ್ಷ ಯೋಗೇಶ ಪ್ರಭು ಮಹಾರಾಜ್, ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ಗೋಪಾಲ ದೇವಾಡಿಗ ಇದ್ದರು. ದೇವರಾಜ ಮರಾಠಿ ಬಂಡಲ ಅಧ್ಯಕ್ಷತೆ ವಹಿಸಿದ್ದರು.