ಮೈಸೂರು: ಮೈಸೂರು-ಬೆಂಗಳೂರು ದಶಪಥ ಎಕ್ಸ್ ಪ್ರೆಸ್ ಹೈವೇ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿ ಮುಂದುವರಿದಿದೆ. ಇದೀಗ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಎಕ್ಸ್ ಪ್ರೆಸ್ ಹೈವೇಯ ಟೋಲ್ ದರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆ ಚಾಲನೆಗೊಂಡು ಐದಾರು ತಿಂಗಳು ಕಳೆಯಿತು. ಜನರ ಸುಲಿಗೆ ಮಾಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಬೆಂಗಳೂರಿಗೆ ಹೋಗಲು ಎರಡೆರಡು ಬಾರಿ ಟೋಲ್ ಶುಲ್ಕ ಕಟ್ಟಬೇಕು. ಇದೊಂದು ಹಗಲು ದರೋಡೆ ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಒಂದು ಕಡೆ 330 ಇನ್ನೊಂದು ಕಡೆಗೆ 330 ರೂಪಾಯಿ, ಇದು ಜನರ ಸುಲುಗೆ ಅಲ್ಲದೆ ಬೇರೇನು ಅಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ನಾಲ್ಕು ಪಥದ ರಸ್ತೆ ಮಾಡಿದ್ದಾಗ ಉಚಿತವಾಗಿ ಸಂಚಾರ ಮಾಡುಬಹುದಿತ್ತು ಎಂದರು.
ಈಗ ದಶಪಥ ರಸ್ತೆ ಅಂತ ಮಾಡಿ ಜನರ ಬಳಿ ಸುಲಿಗೆ ಮಾಡ್ತಾ ಇದ್ದಾರೆ. ಆರಂಭದಲ್ಲಿ 3 ಸಾವಿರ ಕೋಟಿ ವೆಚ್ಚದಲ್ಲಿ ಆರಂಭವಾದ ಈ ರಸ್ತೆಗೆ ರಸ್ತೆ ಕಾಮಗಾರಿ ಈಗ ಸುಮಾರು 12 ಸಾವಿರ ಕೋಟಿ ವೆಚ್ಚವಾಗಿದೆ ಎನ್ನುತ್ತಾರೆ. ಒಟ್ಟು 118 ಕಿ.ಮೀ ಗೆ ಇದೆ. ಕಿ ಮೀ ಗೆ 4 ರೂ ಟೋಲ್ ನಿಗದಿ ಮಾಡಿದ್ದಾರೆ. ಬೇರೆ ಹೆದ್ದಾರಿಗಳಲ್ಲಿ ಕೇವಲ 1.48 ರೂ ನಿಗದಿಯಾಗಿದೆ ಎಂದು ತಿಳಿಸಿದರು.
ಒಂದು ದಿನಕ್ಕೆ ಒಂದು ಲಕ್ಷ ವಾಹನಗಳು ಸಂಚಾರ ಮಾಡುತ್ತವೆ ಎಂಬ ಅಂದಾಜು ಇದೆ. ಒಂದು ದಿನಕ್ಕೆ ಸುಮಾರು 10 ಕೋಟಿ ಕಲೆಕ್ಷನ್ ಆಗುತ್ತದೆ. ಇದೇ ರೀತಿ 30 ವರ್ಷಗಳ ಕಾಲ ಟೋಲ್ ಸಂಗ್ರಕ್ಕೆ ಅನುಮತಿ ಕೊಟ್ಟಿದ್ದಾರೆ. 30 ವರ್ಷಕ್ಕೆ ಎಷ್ಟು ಕೋಟಿ ಆಗುತ್ತೆ ಹೇಳಿ? ಈ ಮೂಲಕ ಸಾವಿರಾರು ಕೋಟಿ ಹಗಲು ದರೊಡೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಮೂಲಕ ರೋಡ್ ರಾಬರಿ ಮಾಡುತ್ತಿದ್ದಾರೆ. ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿ ಜನರನ್ನ ಕೊಲ್ಲುವ ಕೆಲಸ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಬರೀ ಸುಳ್ಳು ಹೇಳಿ, ಜನರಿಗೆ ಮೋಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.