ಭೋಪಾಲ್: ಮಧ್ಯಪ್ರದೇಶ ಸರ್ಕಾರ ಆಯೋಜಿಸಿದ್ದ ಸಾಮೂಹಿಕ ವಿವಾಹದ ವೇಳೆ ಅವಾಂತರವಾಗಿದೆ. ವಧುಗಳಿಗೆ ಅಧಿಕಾರಿಗಳು ಗರ್ಭಧಾರಣೆ ಪರೀಕ್ಷೆ ನಡೆಸಿದ್ದು, ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಕನ್ಯಾ ವಿವಾಹ/ನಿಖಾ ಯೋಜನೆಯಡಿ ಮಧ್ಯಪ್ರದೇಶದ ಗಡ್ಸರೈ (Gadsarai) ಪ್ರದೇಶದ ದಿಂಡೊರಿ (Dindori) ಎಂಬಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಈ ವಿವಾಹ ಸಮಾರಂಭದಲ್ಲಿ ಅಧಿಕಾರಿಗಳು ವಧುಗಳಿಗೆ ಗರ್ಭಧಾರಣೆ ತಪಾಸಣೆ ನಡೆಸಿದ್ದಾರೆ. ಈ ಘಟನೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಲವು ಪ್ರಶ್ನೆಗಳನ್ನು ಎತ್ತಿದೆ. ಯಾರು ಈ ತಪಾಸಣೆಗೆ ಆದೇಶ ನೀಡಿದರು ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದಾರೆ.
ಈ ಘಟನೆ ನಡೆದಿದ್ದು, 29 ಯುವತಿಯರಲ್ಲಿ ಐವರು ಗರ್ಭಧರಿಸಿರುವುದು ಈ ತಪಾಸಣೆಯಿಂದ ಪತ್ತೆಯಾಗಿದ್ದು, ಅವರು ವಿವಾಹದಿಂದ ದೂರ ಉಳಿದಿದ್ದಾರೆ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾದ ಕುಟುಂಬದ ಯುವತಿಯರಿಗಾಗಿ ಸರ್ಕಾರ ಮುಖ್ಯಮಂತ್ರಿ ಕನ್ಯಾ ವಿವಾಹ/ನಿಖಾ ಯೋಜನೆ ಜಾರಿಗೊಳಿಸಿತ್ತು. ಕಾಂಗ್ರೆಸ್ ಘಟನೆ ಬಗ್ಗೆ ತನಿಖೆಗೆ ಆಗ್ರಹಿಸಿದ್ದು, ಇದು ರಾಜ್ಯದ ಬಡ ಹೆಣ್ಣು ಮಕ್ಕಳಿಗೆ ಸರ್ಕಾರ ಮಾಡಿದ ಅವಮಾನ ಎಂದು ಆರೋಪಿಸಿದೆ. ಕಾಂಗ್ರೆಸ್ ಶಾಸಕ (Congress legislator) ಓಂಕಾರ್ ಸಿಂಗ್ ಮರ್ಕಂ (Omkar Singh Markam) ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಇಂತಹ ಗರ್ಭಧಾರಣೆ ಪರೀಕ್ಷೆಯ ಮಾರ್ಗಸೂಚಿ ಹಾಗೂ ನಿಯಮಾವಳಿಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಧ್ಯಪ್ರದೇಶ (Madhya Pradesh) ಕಾಂಗ್ರೆಸ್ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಕಮಲನಾಥ್ (Kamal Nath) ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವ ಈ ವಿಚಾರ ನಿಜವಾಗಿದ್ದಲ್ಲಿ ಯಾರ ಆದೇಶದ ಮೇರೆಗೆ ಮಧ್ಯಪ್ರದೇಶದ ಹೆಣ್ಣು ಮಕ್ಕಳಿಗೆ ಈ ರೀತಿ ಅವಮಾನ ಮಾಡಲಾಗಿದೆ? ರಾಜ್ಯದ ಮುಖ್ಯಮಂತ್ರಿಗಳ ಕಣ್ಣಲ್ಲಿ ರಾಜ್ಯದ ಬಡ ಹಾಗೂ ಆದಿವಾಸಿ ಸಮುದಾಯದ ಹೆಣ್ಣು ಮಕ್ಕಳಿಗೆ ಘನತೆ ಇಲ್ಲವೇ ? ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಮಹಿಳೆಯರೊಂದಿಗೆ ಅನುಚಿತ ವರ್ತನೆ ಪ್ರಕರಣದಲ್ಲಿ ಮುಂಚೂಣಿಯಲ್ಲಿದೆ ಎಂದು ಕಮಲ್ನಾಥ್ ಟ್ವಿಟ್ ಮಾಡಿದ್ದಾರೆ.