ಮಾಸ್ಕೊ: ರಶ್ಯ ಪ್ರವಾಸದಲ್ಲಿದ್ದ ಬೆಲಾರಸ್ ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗಿನ ಸಭೆಯ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಮಾಸ್ಕೋದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲೆಕ್ಸಾಂಡರ್ ಅವರಿಗೆ ವಿಷಪ್ರಾಶನವಾಗಿರುವ ಸಾಧ್ಯತೆಯಿದೆ ಎಂದು ಬೆಲಾರಸ್ನ ವಿಪಕ್ಷ ಮುಖಂಡರನ್ನು ಉಲ್ಲೇಖಿಸಿ ಅಮೆರಿಕದ `ನ್ಯೂಸ್ವೀಕ್’ ವರದಿ ಮಾಡಿದೆ.
ಪುಟಿನ್ ಜೊತೆ ಸಭೆ ನಡೆಸಿದ ಬಳಿಕ ಲುಕಶೆಂಕೊ ತೀವ್ರ ಅಸ್ವಸ್ಥಗೊಂಡಿದ್ದು ತಕ್ಷಣ ಅವರನ್ನು ಮಾಸ್ಕೊದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು 2020ರಲ್ಲಿ ಬೆಲಾರಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಮುಖ ವಿಪಕ್ಷ ಮುಖಂಡ ವಲೆರಿ ಸೆಕಾಲೊ ಮಾಹಿತಿ ನೀಡಿದ್ದಾರೆ.
`ಲುಕಶೆಂಕೊಗೆ ಚಿಕಿತ್ಸೆ ಒದಗಿಸಲು ಅತ್ಯುತ್ತಮ ವೈದ್ಯರ ತಂಡವನ್ನು ನಿಯೋಜಿಸಲಾಗಿದ್ದು ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ರಶ್ಯದ ಪ್ರತಿಷ್ಟೆಗೆ ಹಾನಿಯಾಗದಂತೆ, ರಶ್ಯ ಆರೋಪಿ ಸ್ಥಾನದಲ್ಲಿ ನಿಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ’ ಎಂದು ಸೆಕಾಲೊ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮೇ 9ರಂದು ಮಾಸ್ಕೋದಲ್ಲಿ ನಡೆದ ವಿಜಯ ದಿನಾಚರಣೆಯಲ್ಲಿ ಪಾಲ್ಗೊಂಡ ದಿನದಿಂದ ಲುಕಶೆಂಕೋ ಆರೋಗ್ಯ ಹದಗೆಟ್ಟಿದೆ. ಈ ವಿಷಯ ದೃಢಪಡುತ್ತಿದ್ದಂತೆಯೇ ಬೆಲಾರಸ್ನಲ್ಲಿ ರಶ್ಯದ ಪರಮಾಣು ಶಸ್ತ್ರಾಸ್ತ್ರ ನಿಯೋಜನೆ ಬಗ್ಗೆ ಪುಟಿನ್ ತರಾತುರಿಯಿಂದ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿಯಲ್ಲಿ ಪ್ರಕಟಿಸಿವೆ.