ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ದಿನಗಣನೆ ಆರಂಭವಾಗಿದ್ದು, ರಾಜ್ಯದ ಮೂರು ಪಕ್ಷಗಳೂ ಭರ್ಜರಿಯಾಗಿ ಚುನಾವಣಾ ಪ್ರಚಾರ ನಡೆಸುತ್ತಿವೆ. ಈ ನಡುವೆಯೇ ತಮ್ಮ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಲು ಬಿಜೆಪಿ (BJP) ಪ್ಲ್ಯಾನ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಸಂವಾದ ಕಾರ್ಯಕ್ರಮ ಆಯೋಜಿಸಿದೆ. ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇರುವ ರಾಜ್ಯಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಬಡವರಿಗೆ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪು ನಾವೆಲ್ಲರೂ ಸ್ವಾಗತಿಸಬೇಕು.
ಆದರೆ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರದ ಅಗತ್ಯವಿದೆ. ಬೂತ್ ಮಟ್ಟದಲ್ಲಿ ಬಿಜೆಪಿ ಬಲಪಡಿಸಬೇಕು. 2014ರ ಮೊದಲು 1 ಮನೆ ನಿರ್ಮಿಸಲು 300 ದಿನ ತೆಗೆದುಕೊಳ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 100 ದಿನಗಳಲ್ಲಿ ಮನೆಗಳ ನಿರ್ಮಾಣವಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿದ್ದೇವೆ ಎಂದರು. ಕಾಂಗ್ರೆಸ್ 70 ವರ್ಷಗಳಲ್ಲಿ ಕೇವಲ 7 ಏಮ್ಸ್ ಆಸ್ಪತ್ರೆ ನಿರ್ಮಿಸಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 3 ಪಟ್ಟು ಹೆಚ್ಚಳವಾಗಿದೆ. ಕೇವಲ 7 ವರ್ಷಗಳಲ್ಲಿ 3 ಪಟ್ಟು ಏಮ್ಸ್ ಆಸ್ಪತ್ರೆಗಳ ನಿರ್ಮಾಣ ಮಾಡಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ (Narendra Modi)ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಇನ್ನೂ ಮತ್ತಷ್ಟು ರಣತಂತ್ರಗಳನ್ನ ಹೂಡಲಿದ್ದಾರೆ. ಅದಕ್ಕಾಗಿ ಬಿಜೆಪಿ ರಾಜ್ಯಾದ್ಯಂತ ವಿವಿಧೆಡೆ ಸಕಲ ಸಿದ್ಧತೆ ಮಾಡಿಕೊಂಡಿದೆ.ರಾಜ್ಯ ಬಿಜೆಪಿ ಕಚೇರಿ ಹಾಗೂ ಜೆ.ಪಿ ನಗರದ ಖಾಸಗಿ ಕಾಲೇಜು ಸೇರಿದಂತೆ ವಿವಿಧೆಡೆ ಸಂವಾದಕ್ಕಾಗಿ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಹಾಗೂ ಆಸನಗಳನ್ನ ಸಿದ್ಧಪಡಿಸಲಾಗಿದೆ. ಬಿಜೆಪಿ ಕಚೇರಿಯ 3ನೇ ಮಹಡಿಯಲ್ಲಿ ಎಲ್ಇಡಿ ಪರದೆ ಅಳವಡಿಕೆ ಮಾಡಲಾಗಿದೆ. ಸಂವಾದ ಕಾರ್ಯಕ್ರಮ ವೀಕ್ಷಣೆ ಮಾಡಲು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸಹ ಆಗಮಿಸಿದ್ದಾರೆ.
15 ಕ್ಷೇತ್ರಗಳಲ್ಲಿ ನೇರ ಸಂವಾದ: ಗಾಂಧಿನಗರ(ಬಿಜೆಪಿ ಕೇಂದ್ರ ಕಚೇರಿ), ಜಯನಗರ, ಮಹಾದೇವಪುರ, ಹುಬ್ಬಳ್ಳಿ-ಧಾರವಾಡ ಕೇಂದ್ರ, ಮೈಸೂರು, ಕೊಪ್ಪಳ, ಷಹಾಪುರ, ದೊಡ್ಡಬಳ್ಳಾಪುರ, ಮೊಳಕಾಲ್ಮೂರು, ಹೊಸಪೇಟೆ, ಬಾಗೇಪಲ್ಲಿ, ಮಂಗಳೂರು ದಕ್ಷಿಣ, ಬಾಗೇಪಲ್ಲಿ, ಯಮಕನಮರಡಿ, ಶಿವಮೊಗ್ಗ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇರ ಸಂವಾದ ನಡೆಸುತ್ತಿದ್ದಾರೆ.
ನಮೋ ವರ್ಚುವಲ್ ಸಂವಾದ ಎಲ್ಲಿ..? ಹೇಗೆ..?
* ಪ್ರಧಾನಿ ಮೋದಿ ಪಕ್ಷದ 50 ಲಕ್ಷ ಕಾರ್ಯಕರ್ತರ ಜತೆ ವರ್ಚುವಲ್ ಸಂವಾದ.
* ರಾಜ್ಯದ 58,112 ಬೂತ್ಗಳ ಪಕ್ಷದ ಕಾರ್ಯಕರ್ತರ ಜತೆ ಮೋದಿ ಮನ್ ಕಿ ಬಾತ್.
* 1,680 ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ವರ್ಚುವಲ್ ಸಂವಾದಕ್ಕೆ ವ್ಯವಸ್ಥೆ
* ಮೋದಿ ಸಂವಾದ ವೀಕ್ಷಣೆಗೆ 650 ಕಡೆಗಳಲ್ಲಿ ಎಲ್ಇಡಿ ಪರದೆಗಳ ವ್ಯವಸ್ಥೆ.
* ಬೆಂಗಳೂರಿನ ಜಯನಗರ, ಮಹಾದೇವಪುರ ಸೇರಿ 15 ಕಡೆ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿರೋ ಮೋದಿ.
* ಮೋದಿ ಸಂವಾದಕ್ಕಾಗಿ 24 ಲಕ್ಷ ಮಂದಿ ನಮೋ ಆಪ್ ಡೌನ್ಲೋಡ್
* ಪ್ರತಿ ವಿಧಾನಸಭಾ ಕ್ಷೆತ್ರದಲ್ಲಿ ನಮೋ ಆಪ್ 5,000 ಮಂದಿ ಡೌನ್ಲೋಡ್