ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇಂದು `ಮನ್ ಕಿ ಬಾತ್’ ಕಾರ್ಯಕ್ರಮವನ್ನು ಪುನರಾರಂಭಿಸಿದ್ದಾರೆ. ಇಂದಿನ `ಮನ್ ಕಿ ಬಾತ್’ನಲ್ಲಿ, ಭಾರತದ 2024ರ ಸಾರ್ವತ್ರಿಕ ಚುನಾವಣೆ ವಿಶ್ವದ ಅತಿದೊಡ್ಡ ಚುನಾವಣೆ ಎಂದು ಉಲ್ಲೇಖಿಸಿದ್ದಾರೆ.
ಇಷ್ಟು ದೊಡ್ಡ ಚುನಾವಣೆ ಜಗತ್ತಿನ ಯಾವ ದೇಶದಲ್ಲೂ ನಡೆದಿಲ್ಲ. 65 ಕೋಟಿಗೂ ಹೆಚ್ಚು ಜನ ಮತ ಚಲಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟವನ್ನು ಮರು ಆಯ್ಕೆ ಮಾಡಿದ್ದಕ್ಕೆ ಮತದಾರರಿಗೆ ಅವರು ಧನ್ಯವಾದಗಳನ್ನು ಅರ್ಪಿದರು. ಇದೇ ವೇಳೆ ಮರ ನೆಡುವ ಮೂಲಕ ತಾಯಂದಿರನ್ನು ಗೌರವಿಸುವ ಕೇಂದ್ರದ ಹೊಸ ಅಭಿಯಾನ – `ಏಕ್ ಪೆಡ್ ಮಾ ಕೆ ನಾಮ್’ ಕುರಿತು ಪ್ರಧಾನಿ ಮೋದಿ ಮಾತನಾಡಿದರು. ನಾನೂ ಕೂಡ ನನ್ನ ತಾಯಿಯ ಹೆಸರಿನಲ್ಲಿ ಗಿಡ ನೆಟ್ಟಿದ್ದು, ತಾಯಂದಿರ ಗೌರವಾರ್ಥವಾಗಿ ನಾಡಿನ ಸಮಸ್ತ ಜನತೆ ಗಿಡ ನೆಡುವಂತೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ತಿಂಗಳು ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು 900ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅವರನ್ನು ಪ್ರೇರೇಪಿಸಲು ಜನ ‘cheer4Bharat’ ಹ್ಯಾಶ್ಟ್ಯಾಗ್ನ್ನು ಬಳಸಬೇಕೆಂದು ದೇಶದ ಜನರಿಗೆ ಮೋದಿ ಕರೆ ಕೊಟ್ಟಿದ್ದಾರೆ. ಚುನಾವಣೆ ಘೋಷಣೆ ಬಳಿಕ ಫೆ.25 ರಂದು ಅವರ ಕೊನೆಯ `ಮನ್ ಕಿ ಬಾತ್’ ಕಾರ್ಯಕ್ರಮ ರೇಡಿಯೋದಲ್ಲಿ ಪ್ರಸಾರವಾಗಿತ್ತು.