ಖ್ಯಾತ ನಟ ಕಿಶೋರ್ ಪೋಕ್ಸೊ ಕಾಯ್ದೆಯಡಿ ಯಾರನ್ನೆಲ್ಲ ಶಿಕ್ಷಿಸಬಹುದು ಎಂದುದನ್ನು ವಿವರಿಸಿದ್ದಾರೆ. ಇದೇ ವೇಳೆ ಕುಸ್ತಿಪಟುಗಳ ಪ್ರಕರಣವನ್ನು ಎಳೆತಂದಿರುವ ನಟ,ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಶಿಕ್ಷಾರ್ಹರು ಎಂಬ ಆತಂಕಕಾರಿ ವಿಷಯವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
‘ಪೋಕ್ಸೊ ಕಾಯ್ದೆಯಡಿ ಯಾರಾದರೂ ಅಪ್ರಾಪ್ತ ವಯಸ್ಕರ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿಯನ್ನು ಮುಚ್ಚಿಟ್ಟರೆ ಅವರು ವ್ಯಕ್ತಿಯಾಗಿದ್ದರೆ 6 ತಿಂಗಳು ಮತ್ತು ಅದು ಸಂಸ್ಥೆ ಅಥವಾ ಸಮಿತಿಯಾಗಿದ್ದರೆ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.
ಕುಸ್ತಿಪಟುಗಳ ದೈರ್ಜನ್ಯ ಪ್ರಕರಣದಲ್ಲಿ ವಿನೇಶ್ ಫೋಗಟ್ ಅಪ್ರಾಪ್ತ ವಯಸ್ಕ ಬಾಲಕಿಯೂ ಸೇರಿದಂತೆ ಮಹಿಳಾ ಕುಸ್ತಿ ಪಟುಗಳ ಮೇಲೆ ದೈಹಿಕ ಕಿರುಕುಳದ ಬಗ್ಗೆ ಮೊದಲು ತಿಳಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ. ಆದರೆ ಮೋದಿ ಪೊಲೀಸರಿಗೆ ತಿಳಿಸದೆ ಕ್ರೀಡಾ ಸಚಿವರಿಗೆ ತಿಳಿಸಿದರು, ಕ್ರೀಡಾ ಸಚಿವರೂ ಅದನ್ನು ಪೊಲೀಸರಿಗೆ ತಿಳಿಸಲಿಲ್ಲ ಬದಲಿಗೆ ಆರೋಪಿ ಬ್ರಿಜ್ ಭೂಷಣ್ ಗೇ ತಿಳಿಸಿಬಿಟ್ಟರು. ಆತ ಈ ಬಗ್ಗೆ ಕುಸ್ತಿಪಟುಗಳಿಗೆ ಬೆದರಿಕೆ ಹಾಕಲು ಆರಂಭಿಸಿದ.
ನಂತರ ಕುಸ್ತಿಪಟುಗಳು ಪೊಲೀಸ್ ಠಾಣೆಗೆ ಹೋದಾಗಲೂ, ಒಂದು ಜವಾಬ್ದಾರಿಯುತ ಸಂಸ್ಥೆಯಾದ ದೆಹಲಿ ಪೊಲೀಸ್ ಎಫ್ಐಆರ್ ದಾಖಲಿಸಲಿಲ್ಲ. ಐದು ತಿಂಗಳ ನಂತರ ರಾಷ್ಟ್ರದಾದ್ಯಂತ ಜನರು ಪ್ರತಿಭಟನೆಯನ್ನು ಪ್ರಾರಂಭಿಸಿದಾಗ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಎಫ್ಐಆರ್ ದಾಖಲಿಸಲು ದೆಹಲಿ ಪೊಲೀಸರನ್ನು ಒತ್ತಾಯಿಸಿತು. ಆದ್ದರಿಂದ ಪೋಕ್ಸೊ ಕಾಯ್ದೆಯಡಿ ಪ್ರಧಾನಿ, ಕ್ರೀಡಾ ಸಚಿವ, ವಿಚಾರಣೆಗೆ ರಚಿಸಲಾದ ಸಮಿತಿ, ಪೊಲೀಸರಿಗೆ ಮಾಹಿತಿ ನೀಡದ ಕಾರಣಕ್ಕೆ ಮತ್ತು ಎಫ್ಐಆರ್ ದಾಖಲಿಸದ ದೆಹಲಿ ಪೊಲೀಸರು ಎಲ್ಲರೂ ಶಿಕ್ಷಾರ್ಹರು. ಇಷ್ಟಲ್ಲದೇ ಅಪರಾಧಿಯನ್ನು ಇಷ್ಟೂ ದಿನ ರಕ್ಷಿಸಿ ಕಾನೂನು ಕ್ರಮಕ್ಕೆ ತಮ್ಮ ಅಧಿಕಾರ ಬಳಸಿ ತಡೆ ಮಾಡಿದ್ದಕ್ಕೆ ಇವರೆಲ್ಲರಿಗೂ ಇನ್ನೆಷ್ಟು ಶಿಕ್ಷೆಯೊ ಕೋರ್ಟೇ ಹೇಳಬೇಕು ಎಂದು ಕಿಶೋರ್ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.