ಅತ್ಯುತ್ತಮ ಸಿನಿಮಾಗಳು ತೆರೆಗೆ ಬಂದಾಗ ಅದನ್ನು ಹೊಗಳಿ ಚಿತ್ರತಂಡದವರಿಗೆ ಪ್ರಧಾನಿ ಮೋದಿ ಆಗಾಗೆ ಪ್ರಶಂಸೆ ಮಾಡುತ್ತಲೆ ಬಂದಿದ್ದಾರೆ. ಈ ಬಾರಿ ಮೋದಿ ಆರ್ಟಿಕಲ್ 370 ಚಿತ್ರದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ.
ಕಾಶ್ಮೀರದಲ್ಲಿ ನಡೆದ ಕಾರ್ಯಕ್ರದಲ್ಲಿ ಮಾತನಾಡಿದ ಮೋದಿ, ‘ಆರ್ಟಿಕಲ್ 370 ಸಿನಿಮಾ ಜಮ್ಮು ಕಾಶ್ಮೀರದ ವಿಶೇಷ ಅಧಿಕಾರವನ್ನು ಯಾಕೆ ತಗೆಯಲಾಯಿತು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದಾರೆ.
ಮೋದಿಯ ಭಾಷಣ ಕೇಳಿದ ಆರ್ಟಿಕಲ್ 370 ಸಿನಿಮಾದ ನಾಯಕಿ ಯಾಮಿನಿ ಗೌತಮ್ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ನೈಜ ಕಥೆಯನ್ನು ನಿಮಗೆ ಮತ್ತು ಎಲ್ಲರಿಗೂ ಒಪ್ಪುವಂತೆ ಸಿನಿಮಾ ಮಾಡಿದ್ದೇವೆ ಎನ್ನುವ ಭರವಸೆಯನ್ನು ನಾನು ಮತ್ತು ನನ್ನ ತಂಡ ನೀಡಲಿದೆ ಎಂದು ಯಾಮಿನಿ ಪ್ರತಿಕ್ರಿಯಿಸಿದ್ದಾರೆ.
ಕನ್ನಡತಿ ಪ್ರಿಯಾ ಮಣಿ ಹಾಗೂ ಬಾಲಿವುಡ್ ಹೆಸರಾಂತ ನಟಿ ಯಾಮಿನಿ ಗೌತಮ್ ಕಾಂಬಿನೇಷನ್ ನ ‘ಆರ್ಟಿಕಲ್ 370’ ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ರಿಲೀಸ್ ಆಗಿದ್ದು, ನೋಡುಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟ್ರೈಲರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾತ್ರಗಳು ಇವೆ. ರಿಲೀಸ್ ಆದ ಟ್ರೈಲರ್ ನಲ್ಲಿ ‘ಪೂರಾ ಕಾ ಪೂರಾ ಕಾಶ್ಮೀರ್, ಭಾರತ್ ದೇಶ್ ಕಾ ಹಿಸ್ಸಾ ಥಾ. ಹೇ ಔರ್ ರೆಹೇಗಾ’ ಎನ್ನುವ ಮಾತು ಮತ್ತೆ ಮತ್ತೆ ಪ್ರೇರೇಪಿಸುತ್ತಿದೆ. ಅಂದಹಾಗೆ ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್ 370 ಅನ್ನು ತೆಗೆದು ಹಾಕಲಾದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಫೆಬ್ರವರಿ 23 ರಂದು ಈ ಸಿನಿಮಾ ತೆರೆಗೆ ಬರಲಿದ್ದು, ಯಾಮಿ ಗೌತಮ್ ಖಡಕ್ ಎನ್.ಐ.ಎ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.