ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೃಹತ್ ರೋಡ್ ಶೋ (Road Show) ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಚುನಾವಣಾ ಪ್ರಚಾರದ ಅಂತಿಮ ಘಟ್ಟದಲ್ಲಿ ಮತಶಿಕಾರಿ ನಡೆಸಲು ವಾರದ ಕೊನೆಯಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಪ್ರಧಾನಿ ಮೋದಿ ಬಂದಿದ್ದಾರೆ. ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಪ್ರಾರಂಭವಾದ ರೋಡ್ ಶೋ ಮಲ್ಲೇಶ್ವರಂನಲ್ಲಿ ಅಂತ್ಯಗೊಂಡಿದೆ. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ರೋಡ್ ಶೋ ನಡೆಸಿದರು. ಬೆಂಗಳೂರಿನ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಇಷ್ಟೊಂದು ದೊಡ್ಡ ರೋಡ್ ಶೋ ನಡೆಸಿರುವುದು ಇದೇ ಮೊದಲು.
ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆದಿದೆ. ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆದಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸಿದರು. ರೇಷ್ಮೆಯ ಕೇಸರಿ ಮೈಸೂರು ಪೇಟದಲ್ಲಿ ಕಂಗೊಳಿಸಿದರು. ಪಿಸಿ ಮೋಹನ್, ತೇಜಸ್ವಿ ಸೂರ್ಯ ಸಾಥ್ ನೀಡಿದರು.
ಮೊದಲ ಬಾರಿಗೆ ಬೆಂಗಳೂರು ಪೊಲೀಸರು ಬಿಗಿ ಭದ್ರತೆಯನ್ನು ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ಅಂತ್ಯಗೊಳಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟರು. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಹೂಮಳೆ ಸುರಿಸಿ ಸಂಭ್ರಮಿಸಿದರು. ಈ ವೇಳೆ ಜನರತ್ತ ಪ್ರಧಾನಿ ಮೋದಿ ಅವರು ಹೂವನ್ನು ಎಸೆದು ನಗು ಬೀರಿದರು. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿದೆ. ರೋಡ್ ಶೋ ವೇಳೆ ಮೋದಿಯನ್ನು ನೋಡಲು ವೃದ್ಧರಿಂದ ಚಿಕ್ಕ ಮಕ್ಕಳವರೆಗೂ ಸೇರಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು ಸೇರಿದ್ದು ವಿಶೇಷವಾಗಿತ್ತು.