ನವದೆಹಲಿ: ಇಷ್ಟು ದಿನ ಕುರ್ತಾ, ಪೈಜಾಮಾದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ದಕ್ಷಿಣ ಭಾರತದ ಉಡುಗೆ ಪಂಚೆಯಲ್ಲಿ ಮಿಂಚಿದ್ದಾರೆ. ಹೌದು. ಮೋದಿಯವರು ಸದ್ಯ ಪಂಚೆ ಧರಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ದೆಹಲಿಯ ರಾಜ್ಯ ಸಚಿವ ಎಲ್ ಮುರುಗನ್ ಅವರ ನಿವಾಸದಲ್ಲಿನಡೆದ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಿಯವರು ದಕ್ಷಿಣ ಭಾರತದ ಪಂಚೆಯನ್ನು ಧರಿಸಿದ್ದರು. ಸದ್ಯ ನರೇಂದ್ರ ಮೋದಿಯವರು ಪೊಂಗಲ್ ಆಚರಣೆಯ ವಿಧಿ-ವಿಧಾನಗಳನ್ನು ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವೀಡಿಯೋದಲ್ಲಿ ಏನಿದೆ..?: ಪ್ರಧಾನಿ ಎಡ ಭುಜದ ಮೇಲೆ ಶಾಲು ಹೊದ್ದು, ಕಪ್ಪು ಕೋಟ್ ಜೊತೆಗೆ ಬಿಳಿ ಪಂಚೆ ಧರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಅಲ್ಲದೆ ಒಲೆಯ ಮೇಲಿದ್ದ ಪಾತ್ರೆಗೆ ಏನೋ ಹಾಕುತ್ತಿರುವುದನ್ನು ಕೂಡ ಗಮನಿಸಬಹುದು. ಇದಾದ ಬಳಿಕ ಮಂಟಪದೊಳಗೆ ನಿಂತಿರುವ ಹಸುವಿನ ಕಡೆಗೆ ಹೋಗುತ್ತಾರೆ. ಹಸುವಿನ ಮೇಲೆ ಹೂವು ಹಾಕಿ ಅದಕ್ಕೆ ತಿನ್ನಿಸುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿಯವರು ಸಮಸ್ತ ಜನತೆಗೆ ಪೊಂಗಲ್ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.