ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೈದರಾಬಾದ್ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅವರು ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಸಿಕಂದರಾಬಾದ್ ರೈಲು ನಿಲ್ದಾಣದಿಂದ ಚಾಲನೆ ನೀಡಿದ್ದಾರೆ.
ಈ ಭೇಟಿಯ ವೇಳೆ, ಮೋದಿ ಅವರು ಹೈದರಾಬಾದ್-ಸಿಕಂದರಾಬಾದ್ ಅವಳಿ ನಗರ ಪ್ರದೇಶದ ಉಪನಗರ ವಿಭಾಗದಲ್ಲಿ 13 ಹೊಸ ಎಂಎಂಟಿ ಎಎಸ್ ಸೇವೆಗಳಿಗೂ ಚಾಲನೆ ನೀಡಿದ್ದಾರೆ. ಬಹು-ಮಾದರಿ ಸಾರಿಗೆ ಸೇವೆಯು ಅವಳಿ ನಗರ ಪ್ರದೇಶದ ಪ್ರಯಾಣಿಕರಿಗೆ ವೇಗದ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ಒದಗಿಸುತ್ತದೆ. ಈ ಹೊಸ ರೈಲು ಸೇವೆಗಳು ಅವಳಿ ನಗರದ ಜನರಿಗೆ ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತವೆ.
ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ನಲ್ಗೊಂಡ, ಗುಂಟೂರು, ಓಂಗೋಲ್ ಮತ್ತು ನೆಲ್ಲೂರು ನಿಲ್ದಾಣಗಳಲ್ಲಿ ನಿಲುಗಡೆ ಇದೆ. ಈ ರೈಲು 10 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಸಿಕಂದರಾಬಾದ್ – ತಿರುಪತಿ ವಂದೇ ಭಾರತ್ ರೈಲು (20701) ಸಿಕಂದರಾಬಾದ್ ರೈಲು ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2.30ಕ್ಕೆ ತಿರುಪತಿ ತಲುಪುತ್ತದೆ. ತಿರುಪತಿ – ಸಿಕಂದರಾಬಾದ್ ವಂದೇ ಭಾರತ್ ರೈಲು (20702) ತಿರುಪತಿ ರೈಲು ನಿಲ್ದಾಣದಿಂದ ಮಧ್ಯಾಹ್ನ 3.15 ಕ್ಕೆ ಹೊರಡುತ್ತದೆ. ರಾತ್ರಿ 11.45ಕ್ಕೆ ಸಿಕಂದರಾಬಾದ್ ತಲುಪುತ್ತದೆ.
ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣವನ್ನು 720 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಏರ್ಪೋರ್ಟ್ ಮಾದರಿಯ ಭವ್ಯ ನಿಲ್ದಾಣ ಮುಂದಿನ ದಿನಗಳಲ್ಲಿ ತಲೆಯೆತ್ತಲಿದೆ. ನೂತನ ರೈಲು ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.
ಮರು ನಿರ್ಮಾಣ ಯೋಜನೆಯಡಿ ಅಸ್ತಿತ್ವದಲ್ಲಿರುವ ಪ್ಲಾಟ್ಫಾರ್ಮ್ಗಳನ್ನು ಹೊಸ ನಿಲ್ದಾಣದ ಆಧುನಿಕತೆಗೆ ತಕ್ಕುದಾಗಿ ನವೀಕರಿಸಲಾಗುತ್ತದೆ. 5000 ಕೆವಿಪಿ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನೂ ನಿಲ್ದಾಣ ಹೊಂದಿರಲಿದೆ.