ಡಿಸ್ಪುರ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಸಫಾರಿ ಹಾಗೂ ಜೀಪ್ ಸಫಾರಿ ನಡೆಸಿದ್ದಾರೆ. ನರೇಂದ್ರ ಮೋದಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ.
ಮೋದಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಭೇಟಿ ನೀಡಿದ ಸಂದರ್ಭ ಉದ್ಯಾನದ ಸೆಂಟ್ರಲ್ ಕೊಹೊರಾ ಶ್ರೇಣಿಯ ಮಿಹಿಮುಖ್ ಪ್ರದೇಶದಲ್ಲಿ ಮೊದಲು ಆನೆ ಸಫಾರಿ ನಡೆಸಿದರು. ಬಳಿಕ ಅದೇ ವ್ಯಾಪ್ತಿಯಲ್ಲಿ ಜೀಪ್ ಸಫಾರಿ ನಡೆಸಿದರು. ಈ ವೇಳೆ ಪ್ರಧಾನಿಯೊಂದಿಗೆ ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ಮತ್ತು ಇತರ ಹಿರಿಯ ಅರಣ್ಯ ಅಧಿಕಾರಿಗಳು ಇದ್ದರು.
ರಾಜ್ಯಕ್ಕೆ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಶುಕ್ರವಾರ ಸಂಜೆ ಕಾಜಿರಂಗಕ್ಕೆ ಆಗಮಿಸಿದ್ದರು. ಶನಿವಾರ ಮಧ್ಯಾಹ್ನ ಮೋದಿ ಜೋರ್ಹತ್ನಲ್ಲಿ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ. ಜೋರ್ಹತ್ ಜಿಲ್ಲೆಯ ಮೆಲೆಂಗ್ ಮೆಟೆಲಿ ಪೋಥಾರ್ಗೆ ತೆರಳಲಿರುವ ಮೋದಿ ಸುಮಾರು 18,000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.