ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪ್ರತಿಷ್ಠಿತ ಪಂದ್ಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ವೀಕ್ಷಿಸಲಿದ್ದಾರೆ.
ಭಾರತ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮಾರ್ಚ್ 9 ರಿಂದ ಆರಂಭವಾಗಲಿದ್ದು, ಮೊದಲನೇ ದಿನದಾಟವನ್ನು ನೋಡಲು ಪ್ರಧಾನಿ ಮೋದಿ ಜೊತೆಗೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮೈದಾನಕ್ಕೆ ಆಗಮಿಸಲಿದ್ದಾರೆ.
ಉಭಯ ದೇಶಗಳ ಪ್ರಧಾನಿಗಳು ಪ್ರತಿಷ್ಟಿತ ಪಂದ್ಯವನ್ನು ವೀಕ್ಷಣೆ ಮಾಡಲು ಆಗಮಿಸುತ್ತಿರುವ ಕಾರಣ ಕೆಲವು ಅಭಿಮಾನಿಗಳಿಗೆ ನಿರಾಸೆಯಾಗಿದೆ. ಹೌದು, ಈ ಗಣ್ಯರು ಮೈದಾನಕ್ಕೆ ಆಗಮಿಸುತ್ತಿರುವ ಕಾರಣ ಮೊದಲನೇ ದಿನದ ಟಿಕೆಟ್ ಅನ್ನು ಇನ್ನೂ ಮಾರಾಟ ಮಾಡುತ್ತಿಲ್ಲ. ಭದ್ರತೆಯ ಕಾರಣದಿಂದ ಎಷ್ಟು ಜನ ಅಭಿಮಾನಿಗಳಿಗೆ ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ ಎನ್ನುವುದು ಇನ್ನು ತಿಳಿದಿಲ್ಲ.
ಆದರೆ, ಈಗಾಗಲೇ ಮೊದಲ ದಿನವನ್ನು ಹೊರತುಪಡಿಸಿ ಉಳಿದ ದಿನಗಳ ಟಿಕೆಟ್ ಅನ್ನು ಮಾರಾಟ ಮಾಡಲಾಗುತ್ತಿದೆ. ಬುಕ್ ಮೈ ಶೋ ಅಪ್ಲಿಕೇಶನ್ನಲ್ಲಿ ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ. 200, 300, 350, 1000, ಮತ್ತು 2000 ರುಪಾಯಿಗಳ ದರವನ್ನು ನಿಗದಿಪಡಿಸಲಾಗಿದೆ. ಟಿಕೆಟ್ ಮೊತ್ತದ ಜೊತೆ ಬುಕಿಂಗ್ ಮತ್ತು ವಿತರಣಾ ಶುಲ್ಕ ಕೂಡ ಅನ್ವಯವಾಗಲಿದೆ.
ಮೊದಲ ದಿನದಾಟವೇ ಮುಖ್ಯ
ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಮೂರು ಪಂದ್ಯಗಳು ಮೂರೇ ದಿನಕ್ಕೆ ಮುಕ್ತಾಯವಾಗಿದೆ. ಅಹಮದಾಬಾದ್ ಟೆಸ್ಟ್ ಕೂಡ 5 ದಿನ ನಡೆಯುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ಮೊದಲನೇ ದಿನದಾಟವೇ ಪಂದ್ಯ ರೋಚಕವಾಗಿರುವುದರಿಂದ ಮೊದಲನೇ ದಿನದ ಆಟವನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಆದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಯಾವ ಸಮಯಕ್ಕೆ ಮೈದಾನದಲ್ಲಿ ಹಾಜರಿರುತ್ತಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಇವರಿಬ್ಬರ ಭೇಟಿಯ ಸಮಯವನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಮೊದಲನೇ ದಿನದ ಟಿಕೆಟ್ ಮಾರಾಟಮಾಡುವ ಸಾಧ್ಯತೆ ಇದೆ.
ಗೆಲ್ಲಲೇಬೇಕಿದೆ ಭಾರತ ತಂಡ
ಮೂರನೇ ಟೆಸ್ಟ್ ಪಂದ್ಯವನ್ನು ಸೋತ ಬಳಿಕ ಭಾರತ ತಂಡ ಅಹಮದಾಬಾದ್ನಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ವಿಶ್ವ ಟೆಸ್ಟ್ಚಾಂಪಿಯನ್ಶಿಪ್ ಫೈನಲ್ಗೆ ನೇರವಾಗಿ ಅರ್ಹತೆ ಪಡೆದುಕೊಳ್ಳಬೇಕೆಂದರೆ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಬ್ಯಾಟರ್ ಗಳಿಗೆ ನೆರವಾಗುವಂತ ಪಿಚ್ ನಿರ್ಮಾಣ ಮಾಡುವ ಸಾಧ್ಯತೆ ಇದ್ದು, ಈ ಪಂದ್ಯವಾದರು 5 ದಿನ ನಡೆಯಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.