ಶಿವಮೊಗ್ಗ: ರಾಜ್ಯ ಸರ್ಕಾರ ನಾಳೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡುತ್ತಿದೆ. ಆದರೆ ಮಲೆನಾಡಿನ ಬಹುತೇಕ ಮಹಿಳೆಯರು ಈ ಉಚಿತ ಸೇವೆಯ ಭಾಗ್ಯದಿಂದ ವಂಚಿತರಾಗಿದ್ದಾರೆ. ಮಲೆನಾಡಿನಲ್ಲಿ ಬಹುತೇಕ ಖಾಸಗಿ ಬಸ್ ರೂಟ್ ಸಂಚಾರವಿದ್ದು ಸರ್ಕಾರಿ ಬಸ್ ಸೇವೆ ಎಂಬುದೇ ಇಲ್ಲದಂತಾಗಿದೆ. ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಸೇವೆ ಗಗನ ಕುಸುಮವಾಗಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಮಲೆನಾಡಿನ ಬಹುತೇಕ ಮಹಿಳೆಯರಿಗೆ ಲಭಿಸದಂತಾಗಿದೆ. ಇದಕ್ಕೆ ಕಾರಣ ಜಿಲ್ಲೆಯ ಬಹುತೇಕ ಎಲ್ಲಾ ಬಸ್ ರಸ್ತೆ ಸಂಚಾರ ಮಾರ್ಗಗಳು ಕೂಡ ಖಾಸಗಿ ಬಸ್ ಸೇವೆಯಾಗಿದೆ. ಶಿವಮೊಗ್ಗ ಭದ್ರಾವತಿ ಮಾರ್ಗವನ್ನು ಹೊರತು ಪಡಿಸಿದರೆ, ಇನ್ನು ಐದು ತಾಲೂಕುಗಳಲ್ಲಿ ಶೇಕಡಾ 80 ರಷ್ಟು ಖಾಸಗಿ ಬಸ್ ಗಳ ಸಂಚಾರದ್ದೇ ಕಾರುಬಾರಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಮಲೆನಾಡಿನ ಹೆಣ್ಣು ಮಕ್ಕಳಿಗೆ ಲಭಿಸದ ಭಾಗ್ಯವಾಗಿದೆ. ಈ ಹಿಂದೆ ನಕ್ಸಲ್ ಪೀಡಿತ ಪ್ರದೇಶಗಳೆಂದು ಬಿಂಬಿತವಾಗಿದ್ದ, ಮಲ್ಲಂದೂರು. ಮೇಲುಸಂಕ ಕೆಳಸಂಕ ಗಾಡ್ರಗದ್ದೆ,, ಇಳಿಮನೆಯಂತ ರಿಮೋಟ್ ಪ್ರದೇಶಗಳಲ್ಲಿ ಬಸ್ ಸಂಚಾರವೆಂಬುದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಐದಾರು ಕಿಲೋಮೀಟರ್ ಕಾಡಿನ ದುರ್ಗಮ ಹಾದಿಗಳಲ್ಲಿ ನಡೆದೇ ಸಾಗುವ ವಿದ್ಯಾರ್ಥಿಗಳು ಓದುವುದೇ ಕಷ್ಟವಾಗಿದೆ. ಪ್ರತಿದಿನ ಕೂಲಿ ಕೆಲಸಕ್ಕೆ ಹೋಗುವವರಿಗೆ ಈ ಶಕ್ತಿ ಭಾಗ್ಯ ಶಕ್ತಿ ತುಂಬುತ್ತಿಲ್ಲ.
ಶಿವಮೊಗ್ಗ ನಗರದಲ್ಲಿ ಪ್ರತಿದಿನ ಸುಮಾರು 400 ಕ್ಕೂ ಬಸ್ ಗಳು ಸಂಚರಿಸುತ್ತಿದ್ದು, ಪ್ರತಿದಿನ ಸರಾಸರಿ ಒಂದುವರೆ ಲಕ್ಷ ಕಿಲೋಮೀಟರ್ ನಷ್ಟು ಬಸ್ ಗಳು ಸಂಚರಿಸುತ್ತವೆ ಎನ್ನಲಾಗಿದೆ. ಖಾಸಗಿ ಬಸ್ ಮಾಲೀಕರ ಆತಂಕ, ಯೋಜನೆ ಕೈಬಿಡಿ ಇಲ್ಲ ಅಂದ್ರೆ ಸಬ್ಸಿಡಿ ಕೊಡಿ
ಇನ್ನು ಮಲೆನಾಡಿನಲ್ಲಿ ಖಾಸಗಿ ಬಸ್ ಸೇವೆ ನಂಬಿಕೊಂಡು ಬಹಳಷ್ಟು ಮಂದಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದ ಶಕ್ತಿ ಯೋಜನೆ ಈ ಖಾಸಗಿ ಬಸ್ ನ್ನೇ ನಂಬಿಕೊಂಡ ಕುಟುಂಬಗಳ ಬದುಕಿನ ಮೇಲೆ ಗಾಯದ ಬರೆ ಎಳೆದಿದೆ. ಸಾವಿರಾರು ರೂಪಾಯಿ ತೆರಿಗೆ, ಇನ್ಷುರೆನ್ಸ್, ಹೆಚ್ಚಿದ ಡಿಸೇಲ್ ದರಗಳಿಂದ ಈಗಾಗಲೇ ಖಾಸಗಿ ಬಸ್ ಗಳ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬಹಳಷ್ಟು ಬಸ್ ಗಳನ್ನು ಆರ್ ಟಿ ಓ ಗೆ ಸರಂಡರಾ ಮಾಡಲಾಗಿತ್ತು. ಕೊರೊನಾ ನಂತರದಲ್ಲಿ ಮಾಡಿದ ಸಾಲವನ್ನು ತೀರಿಸುವುದಕ್ಕೂ ಆಗದಿರುವ ಸಂದರ್ಭದಲ್ಲಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿದ್ರೆ, ಖಾಸಗಿ ಬಸ್ ಹತ್ತಲು ಯಾರು ಮುಂದೆ ಬರುತ್ತಾರೆ ಎಂಬುದು ಖಾಸಗಿ ಬಸ್ ಸಿಬ್ಬಂದಿಗಳ ಅಳಲಾಗಿದೆ. ಅಲ್ಲದೆ ವ್ಯವಹಾರವಿಲ್ಲದೆ ಬೀದಿಗೆ ಬರುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಸರ್ಕಾರದ ಶಕ್ತಿ ಯೋಜನೆ ಮಹಿಳೆಯರ ಪಾಲಿಗೆ ವರವಾದರೆ, ಖಾಸಗಿ ಬಸ್ ಮಾಲೀಕರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.ಸರ್ಕಾರ ಕೂಡ ಖಾಸಗಿ ಬಸ್ ಕ್ಷೇತ್ರದತ್ತ ಗಂಭೀರವಾಗಿ ಗಮನ ಹರಿಸಿ,ಅವರ ಧ್ವನಿಗೆ ಕೈಜೋಡಿಸಬೇಕಿದೆ