ಮನಮಾ: ಹಮಾಸ್ ಭಯೋತ್ಪಾದಕರ (Hamas Terrorist) ಕೃತ್ಯ ಖಂಡಿಸಿ ಟ್ವೀಟ್ ಮಾಡಿದ್ದಕ್ಕೆ ಮಂಗಳೂರು (Mangaluru) ಓದಿದ ವೈದ್ಯರನ್ನು ಬಹರೇನ್ ಬಂಧಿಸಿದೆ. ಇಸ್ರೇಲ್ (Israel) ಪರವಾಗಿ ಟ್ವೀಟ್ ಮಾಡಿದ್ದಕ್ಕೆ ಮಂಗಳೂರಿನ ಕೆಎಂಸಿಯಲ್ಲಿ ಎಂಡಿ ಓದಿರುವ ಡಾ. ಸುನೀಲ್ ರಾವ್ (Sunil Rao) ಅವರನ್ನು ರಾಯಲ್ ಬಹರೇನ್ ಆಸ್ಪತ್ರೆ ಆಡಳಿತ ಮಂಡಳಿ (Royal Bahrain Hospital) ವಜಾ ಮಾಡಿದೆ. ಅಷ್ಟೇ ಅಲ್ಲದೇ ಇದು ಸೈಬರ್ ಕ್ರೈಂ ಎಂದು ಪರಿಗಣಿಸಿ ಬಹರೇನ್ ಪೊಲೀಸರು ಸುನೀಲ್ ರಾವ್ ಅವರನ್ನು ಬಂಧಿಸಿದ್ದಾರೆ.
ಹಮಾಸ್ ಉಗ್ರರ ದಾಳಿಯನ್ನು ಖಂಡಿಸಿ ಇಸ್ರೇಲ್ ಪರವಾಗಿ 50 ವರ್ಷದ ಸುನೀಲ್ ರಾವ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಅನ್ನು ಗಮನಿಸಿದ ಬಳಕೆದಾರರು ಬಹರೇನ್ ಸರ್ಕಾರಕ್ಕೆ ಟ್ಯಾಗ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆ ಕೆಲಸದಿಂದ ವಜಾ ಮಾಡಿದೆ. ಡಾ. ಸುನೀಲ್ ರಾವ್ ಅವರ ಪೋಸ್ಟ್ ನಮ್ಮ ಸಮಾಜಕ್ಕೆ ವಿರುದ್ಧವಾಗಿದೆ. ಅವರ ಸಿದ್ದಾಂತ ನಮಗೆ ಒಪ್ಪಿತವಲ್ಲ. ಅದು ನಮ್ಮ ನಿಲುವಲ್ಲ.
ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಕೆಲಸದಿಂದ ವಜಾ ಮಾಡಿದ್ದೇವೆ ಎಂದು ಬಹರೇನ್ ರಾಯಲ್ ಹಾಸ್ಪಿಟಲ್ ಪ್ರತಿಕ್ರಿಯೆ ನೀಡಿದೆ. ಕೆಲಸದಿಂದ ವಜಾಗೊಳಿಸುವ ಮುನ್ನ ಸುನಿಲ್ ರಾವ್ ಎಕ್ಸ್ನಲ್ಲಿ ಕ್ಷಮೆ ಕೇಳಿದ್ದರು. ಬಹರೇನ್ನಲ್ಲಿ 10 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಈ ದೇಶದ ಜನರನ್ನು, ಧರ್ಮವನ್ನು ಗೌರವಿಸುತ್ತೇನೆ. ಒಬ್ಬ ಡಾಕ್ಟರ್ ಆಗಿ ಸಾವು ನೋವುಗಳ ಬಗ್ಗೆ ಮಾತನಾಡಿದ್ದೆ. ಭಾವನೆಗಳಿಗೆ ಧಕ್ಕೆಯಾದರೆ ಕ್ಷಮಿಸಿ ಎಂದು ಪೋಸ್ಟ್ ಮಾಡಿದ್ದರು.