ಬೆಂಗಳೂರು:- ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೇಸ್ ಗೆ ಸಂಬಂಧಿಸಿದಂತೆ ಡ್ಯಾಮೇಜ್ ಕಂಟ್ರೋಲ್ ಗೆ ಸಿದ್ದರಾಮಯ್ಯ ಮೊರೆ ಹೋಗಲಾಗಿದೆ.
ಒಂದೆಡೆ ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳಿಗೆ ನ್ಯಾಯಾಂಗ ಬಂಧನವಾಗಿದ್ದರೆ, ಇತ್ತ ಇದೇ ಪಾಕ್ ಪರ ಘೋಷಣೆ ಆಡಳಿತಾರೂಢ ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿದೆ. ಮೂವರನ್ನು ಬಂಧಿಸಿದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಸೋಮವಾರ ಕಾವೇರಿ ನಿವಾಸದಲ್ಲಿ ದಿಢೀರ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಇದ್ದರು. ಆರೋಪಿಗಳ ಬಂಧನದಿಂದ ಆಗುವ ರಾಜಕೀಯ ಲಾಭ ನಷ್ಟ ಮತ್ತು ವಿಪಕ್ಷಗಳು ಇದನ್ನ ಯಾವ ರೀತಿ ಬಳಸಿಕೊಳ್ತಾರೆ ಅನ್ನೋ ಕುರಿತು ಮಾತುಕತೆ ನಡೆಯಿತು.
ಸರ್ಕಾರಕ್ಕೆ ಡ್ಯಾಮೇಜ್ ಆಗದ ರೀತಿಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಸಮಾಲೋಚನೆ ನಡೆಸಿದರು. ಇನ್ನು ದೆಹಲಿಗೆ ಹೊರಟಿದ್ದ ಸುರ್ಜೇವಾಲಾ ಸಹ ಪ್ರಯಾಣ ರದ್ದು ಮಾಡಿ ವಾಪಸ್ ಬಂದು ಸಿಎಂ, ಡಿಸಿಎಂ ಜೊತೆ ಮಾತುಕತೆ ನಡೆಸಿದರು.
ಈ ವಿದ್ಯಮಾನಗಳೇ ಈ ಪ್ರಕರಣದಿಂದ ಅದ್ಯಾವ ಪರಿ ಆಡಳಿತಾರೂಢ ನಾಯಕರು ವಿಚಲಿತರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅತ್ತ ವಿಪಕ್ಷ ನಾಯಕರಂತೂ ಕಾಂಗ್ರೆಸ್ ವಿರುದ್ಧ, ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ವಿರುದ್ಧ ಮಾತು ಮಾತಿನಲ್ಲೇ ತಿವಿಯುತ್ತಿದ್ದಾರೆ.