ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಡ್ರಗ್ಸ್ ಸೇವಿಸಿದ್ದಾರೆ ಎಂದು ಆರೋಪಿಸಿ ಬಂಧನಕ್ಕೆ ಒಳಗಾಗಿರೋ ನಟಿ ಹೇಮಾರನ್ನು ಸಿಸಿಬಿ ಅಧಿಕಾರಿಗಳು ಆನೇಕಲ್ ಕೋರ್ಟ್ಗೆ ಹಾಜರು ಪಡಿಸಿದ್ದರು. ನಟಿಯನ್ನು ಹೆಚ್ಚುವರಿ ವಿಚಾರಣೆಗಾಗಿ ಸಿಸಿಬಿ ವಶಕ್ಕೆ ನೀಡಬೇಕು ಎಂದು ಅಧಿಕಾರಿಗಳು ಕೋರ್ಟ್ಗೆ ಮನವಿ ಮಾಡಿದ್ದರು. ವಾದ ಆಲಿಸಿದ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು 24 ಗಂಟೆಗಳ ಕಾಲ ಹೇಮಾ ಅವರನ್ನು ಸಿಸಿಬಿ ವಶಕ್ಕೆ ನೀಡಿದೆ.
ಕೋರ್ಟಿಗೆ ಬರುತ್ತಿದ್ದಂತೆಯೇ ಮತ್ತೆ ಮಾಧ್ಯಮಗಳ ಮೇಲೆ ಹೇಮಾ ಗರಂ ಆದರು. ‘ನಾನು ಮರ್ಡರ್ ಮಾಡಿದ್ದೀನಾ. ಅರ್ಧ ರಾತ್ರಿಯಲ್ಲಿ ಕರ್ಕೊಂಡು ಹೋಗಿ ಕಾಡಿನಲ್ಲಿ ಸಹಿ ಮಾಡಿಸಿಕೊಂಡಿದ್ದಾರೆ. ನಾನು ಏನು ಮಾಡಿದ್ದೀನಿ. ನನ್ನನ್ನು ನಡುರಾತ್ರಿಯಲ್ಲಿ ಯಾಕೆ ಹಂಗೆ ಕರೆದುಕೊಂಡು ಹೋದ್ರು. ಇಲ್ಲಿಯ ವರೆಗೆ ನೀವು ಮಾಧ್ಯಮದವರು ಮಾತನಾಡಿಲ್ಲ. ಈಗಲಾದ್ರು ಮಾತನಾಡಿ’ ಎಂದು ಆಕ್ರೋಶ ಹೊರ ಹಾಕಿದರು.
ಹೆಚ್ಚಿನ ವಿಚಾರಣೆಗಾಗಿ ಹೇಮಾರನ್ನು ಸಿಸಿಬಿ ವಶಕ್ಕೆ ನೀಡುವಂತೆ ಕೋರ್ಟಿಗೆ ಸಿಸಿಬಿ ಪರ ವಕೀಲರು ಮನವಿ ಮಾಡಿಕೊಂಡರು. ಪಬ್ಲಿಕ್ ಪ್ರಾಸಿಕ್ಯೂಟರ್ ವಾದಕ್ಕೆ ಹೇಮಾ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ಸಂತೋಷ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಬ್ಲಡ್ ಟೆಸ್ಟ್ ಮಾಡಲಾಗಿದೆ. ನ್ಯಾಯಾಲಯ ಖಾಸಗಿ ಆಸ್ಪತ್ರೆ ವರದಿಗೆ ಮನ್ನಣೆ ನೀಡಬಾರದು. ಎಫ್ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಹಾಗಾಗಿ ಸಿಸಿಬಿ ಕಸ್ಟಡಿಗೆ ನೀಡಬಾರದು ಎಂದು ಹೇಮಾ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು. ವಾದ ಪ್ರತಿವಾದ ಅಲಿಸಿದ ನ್ಯಾಯಾಧೀಶರು ಮಧ್ಯಾಹ್ನ ಮೂರು ಗಂಟೆಗೆ ಆದೇಶ ಕಾಯ್ದಿರಿಸಿದ್ದರು.
ಮೂರು ಗಂಟೆಯ ನಂತರ ಆನೇಕಲ್ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎ.ಎಸ್ ಸಲ್ಮಾ ಅವರು 24 ಗಂಟೆಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ಸಿಸಿಬಿ ವಶಕ್ಕೆ ಪಡೆದ ನಂತರ ಕೋರ್ಟ್ನಿಂದ ಹೊರಬಂದ ವೇಳೆ ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದರು ಹೇಮಾ ಮತ್ತು ಆಕೆಯ ವಕೀಲ ಪಟಾಪಟ್ ಪ್ರಕಾಶ್. ಬಳಿಕ ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಹಾಕುವುದಾಗಿ ತಿಳಿಸಿದರು.