ಮಡಿಕೇರಿ:- ಕೊಡಗಿನಲ್ಲಿ ಜನಾಂಗೀಯ ಸಂಘರ್ಷ ತಾರಕಕ್ಕೇರಿದ್ದು, ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಜನಾಂಗೀಯ ಸಂಘರ್ಷ ತಾರಕಕ್ಕೇರಿದೆ. ದೇವಸ್ಥಾನವೊಂದರ ಉತ್ಸವ ಸಂದರ್ಭ ಸ್ಥಳೀಯ ಧಾರ್ಮಿಕ ಉಡುಪು ಧರಿಸುವ ಸಂಬಂಧ ವಿವಾದ ಬುಗಿಲೆದ್ದಿದ್ದು, ದೇವಸ್ಥಾನ ಇರುವ ಊರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಸರ್ಪಗಾವಲು ನಿಯೋಜನೆ ಮಾಡಲಾಗಿದೆ.
ಕಟ್ಟೆಮಾಡು ದೇವಸ್ಥಾನದಲ್ಲಿ ಧಾರ್ಮಿಕ ಉಡುಪು ಧರಿಸುವ ವಿಷಯದಲ್ಲಿ ಉಂಟಾದ ವಿವಾದದಿಂದ ಜನಾಂಗೀಯ ಸಂಘರ್ಷ ಉದ್ಭವಿಸಿದೆ. ಒಂದು ಜನಾಂಗದ ಸಾಂಪ್ರದಾಯಿಕ ಉಡುಪು ಧರಿಸಲು ಅನುಮತಿ ನಿರಾಕರಿಸಿದ್ದರಿಂದ ಉದ್ವಿಗ್ನತೆ ಹೆಚ್ಚಿದೆ. ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಶಾಂತಿ ಸಭೆ ನಡೆಯಲಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ
ಕಳೆದ ವರ್ಷ ಉತ್ಸವ ನೆರವೇರಿತ್ತು. ಈ ವರ್ಷವೂ ಇದೇ ಡಿಸೆಂಬರ್ 23 ರಿಂದ ಬೇರೆ ಬಗೆಯ ಉತ್ಸವಗಳು ನಡೆದಿವೆ. ಉತ್ಸವದ ಕೊನೆಯ ದಿನ ಅಂದರೆ, ಡಿ. 27 ರಂದು ಸಂಜೆ ದೇವರು ಸ್ನಾನಕ್ಕೆ ಹೊರಡುವ ಸಂದರ್ಭದಲ್ಲಿ ಒಂದು ಜನಾಂಗಕ್ಕೆ ಸೇರಿದ ಹಲವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದಾರೆ. ಇದಕ್ಕೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಹಾಗೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಎರಡೂ ಗುಂಪುಗಳ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದೆ.
ದೇವರ ಮೂರ್ತಿ ಹೊತ್ತು ಜಳಕಕ್ಕೆ ಹೊರಟಿದ್ದ ಅರ್ಚಕ ವೃಂದ ಈ ಘಟನೆಯಿಂದ ಬೇಸರಗೊಂಡು ಉತ್ಸವ ಮೂರ್ತಿಯನ್ನ ಕೆಳಗಿಳಿಸಿದ್ದಾರೆ. ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭ ವ್ಯಕ್ತಿಯೊಬ್ಬ ಮಾರಕಾಸ್ತ್ರ ತೋರಿಸಿದ್ದು, ಮತ್ತಷ್ಟು ಕೆರಳುವಂತೆ ಮಾಡಿದೆ. ಕೊನೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಮಧ್ಯರಾತ್ರಿ 12 ಕಳೆದರೂ ಎರಡೂ ಕಡೆಯವರು ಪಟ್ಟು ಬಿಡಲಿಲ್ಲ. ಹಾಗಾಗಿ ವಿವಾದ ಇತ್ಯರ್ಥವಾಗಿಲ್ಲ.
ಧಾರ್ಮಿಕ ಉಡುಪನ್ನು ಧರಿಸಿ ತೆರಳಲು ಅವಕಾಶ ನೀಡಲಿಲ್ಲ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ತಮ್ಮ ಜನಾಂಗದ ಉಡುಪಿಗೆ ವಿರೋಧ ವ್ಯಕ್ತಪಡಿಸಿದರು ಎಂದು ಆ ಜನಾಂಗದ ಕೆಲವರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.