ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿರುವ ತೇಜ ಸಜ್ಜ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಹನು-ಮಾನ್’ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೇಲರ್ ಬಹಳ ಸದ್ದು ಮಾಡಿದೆ. ಚಿತ್ರತಂಡ ಕೂಡ ಭರದಿಂದ ಪ್ರಚಾರ ನಡೆಸುತ್ತಿದೆ. ಹನುಮಾನ್ ಪ್ರಚಾರದ ಅಂಗವಾಗಿ ಬೆಂಗಳೂರಿಗೆ ಬಂದಿದ್ದ ಚಿತ್ರತಂಡ ಮಾಧ್ಯಮದವರ ಮುಂದೆ ಸಾಕಷ್ಟು ವಿಷಯ ಹಂಚಿಕೊಂಡಿದೆ.
ನಾಯಕ ತೇಜ್ ಸಜ್ಜಾ ಮಾತನಾಡಿ, ಇದು ಹನುಮಾನ್ ದೇವರ ಬಗ್ಗೆ ಇರುವ ಸಿನಿಮಾವಲ್ಲ. ಇದು ಒಬ್ಬ ವ್ಯಕ್ತಿಗೆ ಪವರ್ ಬಂದ್ರೆ ಆತ ಸೂಪರ್ ಹೀರೋ ಆಗುತ್ತಾನೆ. ಅವರ ಬಗ್ಗೆ ಇರುವ ಚಿತ್ರ. ಕಾಮಿಡಿ , ಆಕ್ಷನ್ , ಪ್ರೀತಿ ಎಲ್ಲವೂ ಇದೆ. ಮೊದಲ ಶಾಟ್ ನಲ್ಲಿ ನಿಮಗೆ ಗೂಸ್ ಬಂಪ್ಸ್ ಮೂಮೆಂಟ್ ಬರುತ್ತದೆ ಎಂದರು.
ನಾಯಕಿ ಅಮೃತಾ ಅಯ್ಯರ್ ಮಾತನಾಡಿ, ಹನುಮಾನ್ ನಮ್ಮ ದೇವರು. ಇದೊಂದು ಫ್ಯಾಂಟಸಿ ಮೂವೀ. ಇದು ಹನುಮಾನ್ ಬಗ್ಗೆ ಅಲ್ಲ. ಒಂದು ಹುಡುಗನಿಗೆ ಹನುಮಾನ್ ಪವರ್ ಬಂದಾಗ ಏನಾಗುತ್ತದೆ ಅನ್ನೋದು ಸಿನಿಮಾ. ಚಿತ್ರದ ಕಂಟೆಂಟ್ ತುಂಬಾ ಚೆನ್ನಾಗಿದೆ. ಈ ತರ ಸಿನಿಮಾ ಥಿಯೇಟರ್ ನಲ್ಲಿ ನೋಡಬೇಕು. ಪ್ರಶಾಂತ್ ಸರ್ ಕ್ರಿಯೇಟಿವ್ ಆಗಿ ಡೈರೆಕ್ಟ್ ಮಾಡಿದ್ದಾರೆ. ಕನ್ನಡದಲ್ಲಿ ಕೆಆರ್ ಜಿ ರಿಲೀಸ್ ಮಾಡುತ್ತಿದ್ದಾರೆ ಎಂದರು.
ನಿರ್ಮಾಪಕಿ ಚೈತನ್ಯ ರೆಡ್ಡಿ ಮಾತನಾಡಿ, ಸಿನಿಮಾದಲ್ಲಿ ಹನುಮಾನ್ ಪವರ್ ಬಗ್ಗೆ ತೋರಿಸಲಾಗಿದೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ಮಾಡಲಾಗಿದೆ. ಜನವರಿ 22 ರಾಮಮಂದಿರ ಉದ್ಘಾಟನೆಯಾಗುತ್ತದೆ. ನಮ್ಮ ಸಿನಿಮಾವೂ ಆ ದಿನವೇ ರಿಲೀಸ್ ಆಗ್ತಿದೆ. ಇದು ಕಾಕತಾಳೀಯವಷ್ಟೇ ಎಂದು ವಿವರಿಸಿದರು.
ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ತೇಜ ಸಜ್ಜ ನಟಿಸುತ್ತಿದ್ದು, ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಅಂಜನಾದ್ರಿ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಹನುಮಾನ್ ಕುರಿತು ಎಲ್ಲರಲ್ಲಿಯೂ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಜನವರಿ 12, 2024ರಂದು ಬಿಡುಗಡೆಯಾಗಲಿದೆ.
ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಯುವ ಹಾಗೂ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ.
ಪ್ಯಾನ್ ವರ್ಲ್ಡ್ ಲೆವೆಲ್ ನಲ್ಲಿ ಹನುಮಾನ್ ಸಿನಿಮಾ ರಿಲೀಸ್ ಆಗ್ತಿದೆ. ಭಾರತೀಯ ವಿವಿಧ ಭಾಷೆಗಳಾದ ತೆಲುಗು, ಕನ್ನಡ, ಮರಾಠಿ, ತಮಿಳು, ಮಲಯಾಳಂ, ಇಂಗ್ಲೀಷ್, ಸ್ಯಾನೀಶ್, ಚೈನೀಸ್, ಜಪಾನೀಸ್ ಮತ್ತು ಕೊರಿಯನ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಸಂಕ್ರಾಂತಿ ಹಬ್ಬಕ್ಕೆ ವಿಶ್ವಾದ್ಯಂತ ಹನುಮಾನ್ ದರ್ಶನವಾಗಲಿದೆ. ಕನ್ನಡದಲ್ಲಿ ಈ ಚಿತ್ರವನ್ನು ಕೆಆರ್ ಜಿ ಬಿಡುಗಡೆ ಮಾಡುತ್ತಿದೆ.