ಟ್ರೈಲರ್ ಮೂಲಕವೇ ಸಾಕಷ್ಟು ವಿವಾದ ಸೃಷ್ಟಿಸಿರುವ ‘ದಿ ಕೇರಳ ಸ್ಟೋರಿ’ ಚಿತ್ರ ನಿರ್ಮಾಪಕರ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.
‘ಲವ್ ಜಿಹಾದ್’ ವಿಷಯವನ್ನು ಎತ್ತುವ ಮೂಲಕ ರಾಜ್ಯವನ್ನು ಧಾರ್ಮಿಕ ಉಗ್ರವಾದದ ಕೇಂದ್ರವೆಂದು ಬಿಂಬಿಸುವ ಸಂಘ ಪರಿವಾರದ ಕೆಲಸವನ್ನು ಸಿನಿಮಾದ ನಿರ್ಮಾಪಕರು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಮತ್ತು ರಾಜ್ಯದ ವಿರುದ್ಧ ದ್ವೇಷದ ಪ್ರಚಾರ ಹರಡುವ ಉದ್ದೇಶದಿಂದ ಸಿನಿಮಾ ನಿರ್ಮಿಸಲಾಗಿದೆ ಎಂದು ಟ್ರೇಲರ್ ಮೂಲಕ ತಿಳಿಯುತ್ತದೆ. ‘ಲವ್ ಜಿಹಾದ್’ ವಿಚಾರವನ್ನು ತನಿಖಾ ಸಂಸ್ಥೆಗಳು, ನ್ಯಾಯಾಲಯಗಳು ತಿರಸ್ಕರಿಸಿದ್ದರೂ, ಕೇರಳ ರಾಜ್ಯವನ್ನು ಪ್ರಪಂಚದ ಮುಂದೆ ಅವಮಾನಿಸುವಂತೆ ಸಿನಿಮಾ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾದ ಟ್ರೇಲರ್ ನೋಡಿದರೆ, ಜಾತ್ಯತೀತತೆಯ ನೆಲವಾದ ಕೇರಳದಲ್ಲಿ ಧಾರ್ಮಿಕ ಉಗ್ರವಾದದ ಕೇಂದ್ರವಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಸಂಘ ಪರಿವಾರದ ಪ್ರಚಾರವನ್ನು ಹರಡಲು ಚಿತ್ರ ಪ್ರಯತ್ನಿಸುತ್ತಿದೆ. ಸಂಘ ಪರಿವಾರವು ನಕಲಿ ಕಥೆಗಳು ಮತ್ತು ಚಲನಚಿತ್ರಗಳ ಮೂಲಕ ವಿಭಜನೆಯ ರಾಜಕೀಯ ಹರಡಲು ಪ್ರಯತ್ನಿಸುತ್ತಿದೆ. ಯಾವುದೇ ಸತ್ಯ ಮತ್ತು ಪುರಾವೆಗಳಿಲ್ಲದೆ ಇಂತಹ ಕಟ್ಟು ಕಥೆಗಳನ್ನು ಹರಡುತ್ತಿದ್ದಾರೆ. ಕೇರಳದಲ್ಲಿ 32,000 ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡು ಇಸ್ಲಾಮಿಕ್ ಸ್ಟೇಟ್ ಸೇರಿದ್ದಾರೆ ಎಂಬ ದೊಡ್ಡ ಸುಳ್ಳು ಚಿತ್ರದ ಟ್ರೇಲರ್ನಲ್ಲಿದೆ. ಈ ನಕಲಿ ಕಥೆ ಅವರ ಸುಳ್ಳು ಕಾರ್ಖಾನೆಯ ಉತ್ಪನ್ನ. ರಾಜ್ಯದಲ್ಲಿ ಮತೀಯವಾದವನ್ನು ಹರಡಲು ಮತ್ತು ಒಡಕುಗಳನ್ನು ಸೃಷ್ಟಿಸಲು ಸಿನಿಮಾ ಬಳಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಸಮರ್ಥನೆಯಾಗಲಾರದು ಎಂದು ಟೀಕಿಸಿದ್ದಾರೆ.
ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರು ‘ದಿ ಕೇರಳ ಸ್ಟೋರಿ’ ಸಿನಿಮಾ ಮೇ 5 ರಂದು ಬಿಡುಗಡೆಯಾಗಲಿದೆ.