ಬೆಂಗಳೂರು ;- ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವ ಚಿಂತನೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವ ಚಿಂತನೆ ಇದೆ.ಸಾಮಾನ್ಯವಾಗಿ ಎರಡು ವರ್ಷಗಳಿಗೊಮ್ಮೆ ಮಾರ್ಗಸೂಚಿ ದರ ಏರಿಕೆ ಮಾಡಲಾಗುವುದು. ಆದರೆ, ರಾಜ್ಯದಲ್ಲಿ ನಾಲ್ಕು ವರ್ಷ ಆದರೂ ಮಾರ್ಗಸೂಚಿ ದರ ಏರಿಕೆ ಮಾಡಿಲ್ಲ. ಹೀಗಾಗಿ ದರ ಏರಿಕೆ ಮಾಡುವ ಚಿಂತನೆ ಇದೆ ಎಂದರು.
ಇನ್ನೂ ಇದೇ ವೇಳೆ ಮಳೆ ಕೊರತೆ ಮುಂದುವರಿದರೆ ಜುಲೈ ಮೊದಲ ವಾರದಲ್ಲಿ ಬರಗಾಲ ಘೋಷಣೆ ಮಾಡಬೇಕಾ ಅಥವಾ ಬೇಡ್ವಾ ಎಂದು ತೀರ್ಮಾನಿಸುತ್ತೇವೆ ಎಂದರು.
ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ ಕಾಡಿದೆ. ಮುಂಗಾರು ತಡವಾಗಿ ಪ್ರವೇಶ ಮಾಡಿದ ಕಾರಣ ಸಮಸ್ಯೆ ಎದುರಾಗಿದೆ. ಚಂಡಮಾರುತ ತೇವಾಂಶ ಎಳೆದುಕೊಂಡಿದ್ದರಿಂದ ದಕ್ಷಿಣ ಭಾರತಕ್ಕೆ ಮುಂಗಾರು ತಡವಾಗಿದೆ. ಹವಾಮಾನ ಇಲಾಖೆಯ ತಜ್ಞರ ವೈಜ್ಞಾನಿಕ ಮಾಹಿತಿ ಪ್ರಕಾರ, ನಿನ್ನೆಯಿಂದ ಮುಂಗಾರು ಚುರುಕು ಆಗ್ತಿದೆ. ಉಡುಪಿ, ಕಾರವಾರದಲ್ಲಿ ಮಳೆ ಕಡಿಮೆ ಇತ್ತು. ಈಗ ಅಲ್ಲಿ ಎಲ್ಲ ಕಡೆಗಳಲ್ಲಿ ವಾಡಿಕೆಯಂತೆ ಮಳೆಯಾಗಿದೆ. ಆ ಭಾಗದಲ್ಲಿ ಮುಂಗಾರು ಪ್ರವೇಶ ಆಗಿದೆ. ಅದೇ ರೀತಿ ರಾಜ್ಯದಲ್ಲೂ ವ್ಯಾಪಿಸಿಕೊಳ್ಳಲಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲೂ ಮಳೆ ಆಗುತ್ತದೆ ಎಂದು ಹೇಳಿದ್ದಾರೆ ಎಂದರು.