ಹುಬ್ಬಳ್ಳಿ: ಬಾಲ ಕಾರ್ಮಿಕನನ್ನು ಗೃಹ ಕಾರ್ಮಿಕನಾಗಿ ಕೆಲಸಕ್ಕೆ ನೇಮಿಸಿಕೊಂಡಿರುವ ದೂರಿನನ್ವಯ ಮೇ.26 ರಂದು ಹುಬ್ಬಳ್ಳಿಯ ಲಿಂಗರಾಜನಗರ ವ್ಯಾಪ್ತಿಯಲ್ಲಿ ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ಮನೆಯ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಠಾತ್ ದಾಳಿ ನಡೆಸಿದರು.
ಈ ಸಮಯದಲ್ಲಿ ಮಗು ಕೆಲಸ ಮಾಡುತ್ತಿರುವುದು ಕಂಡು ಬಂದಿತು. ಇದು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರ ಉಲ್ಲಂಘನೆಯಾಗಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಮತ್ತು 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ದಾಳಿಯಲ್ಲಿ ಸಿಕ್ಕಿರುವ ಬಾಲ ಕಾರ್ಮಿಕ ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಸಹಾಯಕ ಕಾರ್ಮಿಕ ಆಯುಕ್ತರ ನಿರ್ದೇಶನದ ಮೇರೆಗೆ ಕೈಗೊಳ್ಳಲಾಗಿದೆ ಮತ್ತು ಈ ಕಾರ್ಯಾಚರಣೇಯ ನೇತೃತ್ವವನ್ನು ಮಾರಿಕಾಂಬಾ ಹುಲಕೋಟಿ ಕಾರ್ಮಿಕ ಅಧಿಕಾರಿ ಉಪ ವಿಭಾಗ-2, ಹುಬ್ಬಳ್ಳಿ ವಹಿಸಿಕೊಂಡಿದ್ದರು. ಈ ಪ್ರಕರಣವು ಅಶೋಕ ಓಡೆಯರ ಹಿರಿಯ ಕಾರ್ಮಿಕ ನಿರೀಕ್ಷಕರು 3ನೇ ವೃತ್ತ, ಹುಬ್ಬಳ್ಳಿ ಇವರ ಕಾರ್ಯವ್ಯಾಪ್ತಿಗೆ ಒಳಪಡುವುದರಿಂದ ಕೆಲಸಕ್ಕೆ ನೇಮಿಸಿಕೊಂಡ ಮನೆಯ ಮಾಲಿಕರ ವಿರುದ್ಧ ಪ್ರಕರಣವನ್ನು ದಾಖಲಿಸಲು ಕ್ರಮ ಕೈಗೊಂಡಿದ್ದಾರೆ.