ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಂಧನ ವಿರೋಧಿಸಿ ಪಂಜಾಬ್ನಲ್ಲಿ (Punjab) ಪ್ರತಿಭಟನೆ ನಡೆಸುತ್ತಿರುವ 1000 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ 945 ಮಂದಿ ಕಾನೂನು ಉಲ್ಲಂಘಿಸಿದ್ದಾರೆ. ಉಳಿದವರು ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಜಿ ಪ್ರಧಾನಿಯನ್ನು ಪಾಕಿಸ್ತಾನದ ಪ್ಯಾರಾ ಮಿಲಿಟರಿ ಪಡೆ ಬಂಧಿಸಿತ್ತು. ನಂತರ ಉಂಟಾದ ಹಿಂಸಾಚಾರದಲ್ಲಿ 130 ಅಧಿಕಾರಿಗಳು ಗಾಯಗೊಂಡಿದ್ದರು.
ಪ್ರಕರಣವೊಂದರ ವಿಚಾರಣೆಗಾಗಿ ಇಸ್ಲಾಮಾಬಾದ್ನ ಹೈಕೋರ್ಟ್ (Islamabad High Court) ತೆರಳುತ್ತಿದ್ದ ವೇಳೆಯೇ ಇಮ್ರಾನ್ಖಾನ್ ಅವರನ್ನು ಬಂಧಿಸಲಾಗಿತ್ತು. ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ಬಳಿಕ ಅವರ ಬೆಂಬಲಿಗರು ಲಾಹೋರ್ನಲ್ಲಿರುವ ಸೇನಾ ಕಮಾಂಡರ್ಗಳ ನಿವಾಸದ ಆವರಣವನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದರು. ಪೇಶಾವರದಲ್ಲಿ ರೇಡಿಯೋ ಕಟ್ಟಡಕ್ಕೂ ಬೆಂಕಿ ಹಚ್ಚಲಾಗಿತ್ತು. ಇಸ್ಲಾಮಾಬಾದ್ನಾದ್ಯಂತ ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಸೆಕ್ಷನ್ 144 ಜಾರಿಯಲ್ಲಿದ್ದು, ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.