ಧಾರವಾಡ: ಸದಾಶಿವ ಆಯೋಗ ವರದಿ ಜಾರಿ ಮಾಡಿದ್ದರಿಂದ ತಮ್ಮ ಸಮುದಾಯಕ್ಕಿದ್ದ ಮೀಸಲಾತಿ ಕಡಿತಗೊಂಡಿದೆ ಎಂದು ಆರೋಪಿಸಿ ಬಂಜಾರ ಸಮುದಾಯದವರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು.
ಇದೇ ವಿಚಾರವಾಗಿ ಬಂಜಾರ ಸಮಾಜದವರಿಂದ ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸದ ಮೇಲೆ ನಡೆದ ದಾಳಿ ಬೆನ್ನಲ್ಲೇ ಇದೀಗ ಅದೇ ಸಮುದಾಯದವರು ಧಾರವಾಡದಲ್ಲೂ ಬೃಹತ್ ಪ್ರತಿಭಟನೆ ನಡೆಸಿದರು.
ಧಾರವಾಡದ ಕಡಪಾ ಮೈದಾನದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿವರೆಗೂ ಬಂಜಾರ ಸಮಾಯದಾಯದವರು ಪ್ರತಿಭಟನಾ ರ್ಯಾಲಿ ನಡೆಸಿದರು. ಕೆಲ ಕಾಲ ಪ್ರತಿಭಟನಾಕಾರರು ಜ್ಯುಬಿಲಿ ವೃತ್ತದಲ್ಲಿ ನಿಂತು ಪ್ರತಿಭಟನೆ ನಡೆಸಿದರು. ವಾಹನ ಸಂಚಾರಕ್ಕೆ ಅಡಚಣೆಯೂ ಉಂಟಾಯಿತು. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಅಲ್ಲಿಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದರು
ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಬಹುದು ಎಂಬ ಉದ್ದೇಶದಿಂದ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿತ್ತು.
ಭಾರತದ ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ಸುಪ್ರಿಂಕೋರ್ಟ್ನ ತೀರ್ಪಿಗೆ ವಿರುದ್ಧವಾದ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳನ್ನಾಗಿ ವರ್ಗಿಕರಿಸಿ ಮೀಸಲಾತಿ ಹಂಚಿಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿರುವುದನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಒಳ ಮೀಸಲಾತಿಯೇ ಅಸಂವಿಧಾನಿಕವಾಗಿರುವಾಗ ಗುಂಪು 3ರ ಹೆಸರಿನಲ್ಲಿ ಬಂಜಾರಾ, ಭೋವಿ, ಕೊರಚಾ, ಕೊರಮ ಸಮುದಾಯಗಳಿಗೆ ಶೇಕಡಾ 4.5ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದು ಕೂಡ ಅವೈಜ್ಞಾನಿಕವಾಗಿದೆ. ಇದು ಭಾರತದ ಸಂವಿಧಾನ ಹಾಗೂ ಸಮುದಾಯಗಳಿಗೆ ಮಾಡಿದ ಮಹಾ ದ್ರೋಹವಾಗಿದೆ. ನಮ್ಮ ಹಿಂದುಳಿದಿರುವಿಕೆಯನ್ನು ಮತ್ತು ಜನಸಂಖ್ಯೆಯನ್ನು ಪರಿಗಣಿಸದೇ ಶೇಕಡಾ 4.5ರ ಪ್ರಮಾಣದ ಮೀಸಲಾತಿ ಹಂಚಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.
ಚಾರಿತ್ರಿಕ ಆಧಾರದ ಮೇಲೆ ಸಾಂವಿಧಾನಿಕ ಸ್ಥಾನಮಾನ ಪಡೆದುಕೊಂಡಿರುವ ಬಂಜಾರಾ, ಭೋವಿ, ಕೊರಚಾ, ಕೊರಮ ಸಮುದಾಯಗಳನ್ನು ಎಸ್ಸಿ ಪಟ್ಟಿಯಿಂದ ಹೊರಹಾಕುವುದು ಯಾರಿಂದಲೂ ಸಾಧ್ಯವಿಲ್ಲ. ಕೆಲವರು ನಮ್ಮ ಸಮುದಾಯಗಳಿಗೆ ದೊಡ್ಡ ಸಹಾಯ ಮಾಡಿದ್ದೇವೆ ಎಂದು ಬಿಂಬಿಸುತ್ತಿದ್ದಾರೆ. ಅಂತಹ ವ್ಯರ್ಥ ಪ್ರಯತ್ನಗಳ ಮೂಲಕ ಸಮಾಜದ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಕೂಡಲೇ ಸಮುದಾಯಗಳಲ್ಲಿ ಆತಂಕ ಹುಟ್ಟಿಸಿ ಅಪಮಾನ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಒತ್ತಾಯ ಮಾಡಿದರು.
ಕೂಡಲೇ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಎಲ್ಲ ರಾಜಕೀಯ ಪಕ್ಷಗಳು ಸ್ಪಂದಿಸಬೇಕು. ಇಲ್ಲದೇ ಹೋದಲ್ಲಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಅವರು ಎಚ್ಚರಿಸಿದರು.