ಧಾರವಾಡ : ರಾಜ್ಯ ಸರ್ಕಾರದ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ವಾಹನ ಚಾಲಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ, ಧಾರವಾಡದಲ್ಲಿ ಗುತ್ತಿಗೆ ಚಾಲಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಮತ್ತು ಸಹಾಯಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ಸದಸ್ಯರು ಸರ್ಕಾರಗಳ ವಿರುದ್ಧ ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ಸೇವಾ ಭದ್ರತೆ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಯಾವಾಗ ಯಾರನ್ನು ತೆಗೆದು ಹಾಕುತ್ತಾರೋ, ಯಾರಿಗೆ ಟೆಂಡರ್ ಆಗುತ್ತೋ ಎಂಬ ಭಯದಲ್ಲಿಯೇ ಗುತ್ತಿಗೆ ಚಾಲಕರು ಕಾರ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕೂಡಲೇ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ವಾಹನ ಚಾಲಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಇನ್ನಿತರ ಬೇಡಿಕೆ ಈಡೇರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದರು.
ಈಗಾಗಲೇ ಹಲವಾರು ಬಾರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಹನ ಚಾಲಕರ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂರವರಿಗೆ ಮನವಿ ಮಾಡಿದರು.