ಹೊಸ ತೆರಿಗೆ ಹಾಗೂ ವಿವಾದಾತ್ಮಕ ಹಣಕಾಸು ಮಸೂದೆ ವಿರೋಧಿಸಿ ಕಿನ್ಯಾದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಘಟನೆಯಲ್ಲಿ ಏಳು ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಇದೀಗ ಭಾರತೀಯರು ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ ಹೈಕಮೀಷನ್ ಸಲಹೆ ನೀಡಿದೆ.
ಕಿನ್ಯಾದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಹಿಂಸಾಚಾರ ಹೆಚ್ಚಾಗುತ್ತಿದೆ, ಪರಿಸ್ಥಿತಿ ಉದ್ವಿಗ್ನವಾಗಿದ್ದು ಭಾರತೀಯರು ಜಾಗರೂಕರಾಗಿರಬೇಕು. ಅನಾವಶ್ಯಕವಾಗಿ ಹೊರಗೆ ಹೋಗಬಾರದು, ಪ್ರತಿಭಟನೆ ಸ್ಥಳಗಳಲ್ಲಿ ಇರದಂತೆ ಜಾಗ್ರತೆವಹಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇಲ್ಲಿಯವರೆಗೂ ಏಳು ಜನರು ಮೃತಪಟ್ಟು 31ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಯಾನಿಟರಿ ಟವೆಲ್ ಮತ್ತು ಡೈಪರ್ಗಳ ಮೇಲಿನ ತೆರಿಗೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಇದರ ಜೊತೆಗೆ ಇನ್ನೂ ಹಲವು ಸರಕುಗಳ ಮೇಲಿನ ತೆರಿಗೆ ಹೆಚ್ಚಳಕ್ಕೆ ಅನುವು ಮಾಡಿಕೊಡುವ ಹಣಕಾಸು ಮಸೂದೆ ಮೇಲೆ ಸಂಸತ್ನಲ್ಲಿ ಚರ್ಚೆ ನಡೆದಿದ್ದು, ಮಸೂದೆಯನ್ನು ಮತಕ್ಕೆ ಹಾಕಲಾಗಿದೆ. ಪ್ರಸ್ತಾವಿತ ತೆರಿಗೆಗಳನ್ನು ವಿರೋಧಿಸಿ ಕಳೆದ ಕೆಲ ದಿನಗಳಿಂದಲೂ ಇಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೀಗ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.