ಮಂಡ್ಯ :- ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಕೆ ಮಾಡಲು ಕೇಂದ್ರ ಸರ್ಕಾರ ನಿರಾಕರಿಸುತ್ತಿದ್ದು, ರಾಜಕೀಯ ದ್ವೇಷ ಸಾಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಜೂನ್ 20ರಂದು ರಾಜ್ಯ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಹೇಳಿದರು. ಮದ್ದೂರು ಪಟ್ಟಣದ ಶಿವಪುರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಕೆ.ಎಂ.ಉದಯ್,
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲ ಎಂಬ ಒಂದೇ ಉದ್ದೇಶದಿಂದ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಕ್ರೆಡಿಟ್ ಸಿಗುತ್ತೆ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಚಿತ ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆಯನ್ನು ಹಾಳು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಮಾರಾಟವನ್ನು ನಿಲ್ಲಿಸಿದೆ ಎಂದು ವಾಗ್ಧಾಳಿ ನಡೆಸಿದರು. ಬಿಜೆಪಿಯ ದ್ವೇಷದ ರಾಜಕಾರಣ ಬಡವರ ಹೊಟ್ಟೆಯ ಮೇಲೆ ಹೊಡೆಯುವ ದುರಾಡಳಿತಕ್ಕೆ ನಾವು ಉತ್ತರ ನೀಡಲೇ ಬೇಕಿದೆ.
ಭ್ರಷ್ಠ ಬಿಜೆಪಿ ಸರ್ಕಾರ ಜನರಿಗೆ ದ್ರೋಹ ಮಾಡಿ ಕಾಂಗ್ರೆಸ್ ಆಡಳಿತದ ಮೇಲೆ ದಾಳಿ ನಡೆಸುತ್ತಿದೆ ಎಂದು ಕಿಡಿಕಾರಿದರು. ಅನ್ನಭಾಗ್ಯ ಯೋಜನೆಯು ಸಿಎಂ ಸಿದ್ದರಾಮಯ್ಯನವರ ಕನಸಿನ ಯೋಜನೆ. ಕೇಂದ್ರ ಸರ್ಕಾರ ಪ್ರತಿಯೊಬ್ಬರಿಗೆ ನೀಡುವ 5 ಕೆಜಿ ಅಕ್ಕಿ ಜೊತೆಗೆ ತಾವು ಸಹ ಐದು ಕೆಜಿ ಅಕ್ಕಿ ಸೇರಿಸಿ ಪ್ರತಿಯೊಬ್ಬರಿಗೆ 10 ಕೆಜಿ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ರು. ಆದರೆ, ಕೇಂದ್ರ ಸರ್ಕಾರ ತಾನು ನೀಡುತ್ತಿದ್ದ 5 ಕೆಜಿ ಅಕ್ಕಿಯನ್ನು ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ ಜೂ.20ರಂದು (ಮಂಗಳವಾರ) ಬೆಳಗ್ಗೆ 11 ಗಂಟೆಗೆ ಮಂಡ್ಯ ನಗರದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಇದೇ ವೇಳೆ ಕರೆ ನೀಡಿದರು. ಚುನಾವಣಾ ಪೂರ್ವದಲ್ಲಿ ನಮ್ಮ ಪಕ್ಷ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ. ಈ ಬಗ್ಗೆ ವಿರೋಧ ಪಕ್ಷಗಳು ಸೃಷ್ಟಿಸುತ್ತಿರುವ ಗೊಂದಲಗಳಿಗೆ ರಾಜ್ಯದ ಜನತೆ ಕಿವಿಗೊಡಬಾರದು. ಈಗಾಗಲೇ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಇಂದಿನಿಂದ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಸಂಬಂಧಿಸಿದ ಕಚೇರಿಯಲ್ಲಿ ಹಾಕಬಹುದಾಗಿದೆ. ಸರ್ಕಾರ ಎಲ್ಲಾ ಯೋಜನೆಗಳನ್ನು ಹಂತ ಹಂತವಾಗಿ ಈಡೇರಿಸಲಿದೆ ಈ ಬಗ್ಗೆ ಜನತೆಯಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಮದ್ದೂರು ತಾಲೂಕಿನಲ್ಲಿ ನಾಲೆಗಳು ಆಧುನೀಕರಣಗೊಳ್ಳಬೇಕು. ನಾಲೆಗಳು ಆಧುನಿಕರಣ ಆಗದ ಹಿನ್ನೆಲೆಯಲ್ಲಿ ಕೊನೆ ಭಾಗಕ್ಕೆ ಕೆ.ಆರ್.ಎಸ್ ನೀರು ತಲುಪುತ್ತಿಲ್ಲ. ಹಾಗೂ ಮಂಡ್ಯದಲ್ಲಿ ರಿಂಗ್ ರಸ್ತೆ ನಿರ್ಮಾಣ. ಟ್ರಾಮಾ ಕೇರ್ ಅಸ್ಪತ್ರೆ ನಿರ್ಮಾಣ ಸೇರಿದಂತೆ ಜಿಲ್ಲೆಯ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಮಾಡಿಕೊಂಡುವಂತೆ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಮದ್ದೂರು ತಾಲೂಕಿನಲ್ಲಿ ಈ ಹಿಂದೆ ಸರ್ಕಾರದ ವತಿಯಿಂದ ಮಾಡಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಸಂಬಂಧ ಉನ್ನತ ತನಿಖೆ ನಡೆಸಲಾಗುವುದು. ಒಂದು ವೇಳೆ ಕಳೆಪೆ ಕಾಮಗಾರಿ ಎಂದು ತಿಳಿದು ಬಂದರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮದ್ದೂರು ಪಟ್ಟಣದ ಪೇಟೆ ಬೀದಿಯಲ್ಲಿ ದಿನ ದಿನಕ್ಕೂ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಶೀಘ್ರವಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆ ಅಗಲೀಕರಣ ಮಾಡಲು ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಜನರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಲಿಂಗೇಗೌಡ ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ