ದೆಹಲಿ: ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರದ ಗಮನ ಸೆಳೆಯಲು, ನಮ್ಮ ಪಾಲಿನ ಅನುದಾನದ ಬಗ್ಗೆ ಜನರಿಗೆ ಮನದಟ್ಟು ಮಾಡಲು ರಾಜ್ಯ ಸರ್ಕಾರ ದೆಹಲಿಯಲ್ಲಿ ಹೋರಾಟ ನಡೆಸುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಫೆ.7ರಂದು ರಾಜ್ಯ ಸರ್ಕಾರದ ವತಿಯಿಂದ ನಡೆಯಲಿರುವ ಪ್ರತಿಭಟನೆಯ ಸ್ಥಳ ಜಂತರ್ ಮಂತರ್ನಲ್ಲಿ ಪರಿಶೀಲನೆ ನಡೆಸಿ, ಸೋಮವಾರ ರಾತ್ರಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ಇಂದು ರಾಜ್ಯ ಸರ್ಕಾರ ನಡೆಸಲಿರುವ ಪ್ರತಿಭಟನಾ ಸ್ಥಳ ಪರಿಶೀಲಿಸಿದ್ದೇನೆ. ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟ ಇದಾಗಿದ್ದು, ಇದು ಪಕ್ಷದ ಹೋರಾಟವಲ್ಲ. ನಮ್ಮ ತೆರಿಗೆ ನಮ್ಮ ಹಕ್ಕು. ನಮ್ಮ ಅನುದಾನ ನಮ್ಮ ಹಕ್ಕು. ನಮ್ಮ ಅಭಿವೃದ್ಧಿ ನಮ್ಮ ಜವಾಬ್ದಾರಿ. ಈ ವಿಚಾರವಾಗಿ ಜನರಿಗೆ ಮನದಟ್ಟು ಮಾಡಬೇಕು. ನಮ್ಮ ಪಾಲಿನ ಅನುದಾನ ಕೊಡಿಸುವುದು ನಮ್ಮ ಜವಾಬ್ದಾರಿ. ಜನ ನಮಗೆ ಮತ ಹಾಕಿ ಅಧಿಕಾರಕ್ಕೆ ತಂದಿದ್ದಾರೆ. ನಾವು ಸಮಾಜದ ಋಣ ತೀರಿಸಬೇಕು. ಬಿಜೆಪಿ ಡಬಲ್ ಎಂಜಿನ್ ಸರ್ಕಾರ ನಮಗೆ ನ್ಯಾಯ ಒದಗಿಸಲಿದೆ ಎಂದು ಭಾವಿಸಿದ್ದೆವು ಎಂದರು.