ಹುಬ್ಬಳ್ಳಿ : ಬಾಕಿ ಹಣ ಬಿಡುಗಡೆ ಸೇರಿ ಉತ್ತರ ಕರ್ನಾಟಕದ ಗುತ್ತಿಗೆದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪದಾಧಿಕಾರಿಗಳು, ಎಲ್ಲ ವಿಷಯದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ.
ಉತ್ತರ ಹಾಗೂ ದಕ್ಷಿಣ ಕರ್ನಾಟಕವನ್ನು ಸಮನಾಗಿ ನೋಡಬೇಕು. ಇಲ್ಲವಾದಲ್ಲಿ ಉತ್ತರ ಕರ್ನಾಟಕ ಬೇರೆ ರಾಜ್ಯ ಆಗುವಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಸಿದರು.
ಉತ್ತರ ಕರ್ನಾಟಕದ ಗುತ್ತಿಗೆದಾರರ ಸುಮಾರು 25,000 ಸಾವಿರ ಕೋಟಿ ರೂ. ಹಣ ಬಾಕಿ ಇದೆ. ಇದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಾಕಿ ಹಣ ಪಾವತಿಸುವವರೆಗೂ ಹೊಸ ಟೆಂಡರ್ ಕರೆಯಬಾರದು. ಎಲ್ಲ ಇಲಾಖೆಗಳಲ್ಲೂ ಕಾಮಗಾರಿಯ ಪೂರ್ಣ ಹಣವಿದ್ದರೆ ಮಾತ್ರ ಟೆಂಡರ್ ಕರೆಯಬೇಕು. ಗುತ್ತಿಗೆದಾರ ಬಿಲ್ ಸಲ್ಲಿಸಿದ 60 ದಿನಗಳ ಒಳಗೆ ಹಣ ಪಾವತಿಸಬೇಕು. ಇಲ್ಲವಾದರೆ ಸರ್ಕಾರ ಬಡ್ಡಿ ಹಾಕಿ ಕೊಡಬೇಕು ಎಂದು ಆಗ್ರಹಿಸಿದರು.
ಕೆಐಆರ್ಡಿಎಲ್ ಮತ್ತು ನಿರ್ಮಿತಿ ಕೇಂದ್ರಗಳು ಸಹ ಗುತ್ತಿಗೆದಾರರಂತೆ ಟೆಂಡರ್ನಲ್ಲಿ ಭಾಗವಹಿಸಿ ಟೆಂಡರ್ಗಳನ್ನು ಪಡೆಯುವುದು ಸೇರಿ ಇತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.
ಸಂಘದ ಅಧ್ಯಕ್ಷ ಸುಭಾಷ ಪಾಟೀಲ, ಪ್ರಧಾನ ಕಾರ್ಯದರ್ಶಿ ರವೀಂದ್ರ ಮಾನೆ, ದೊಡ್ಡಬಸನಗೌಡರ, ಕೆ. ವೆಂಕರೆಡ್ಡಿ, ಸುಧಾಕರ ರೆಡ್ಡಿ, ಬಿ.ಎಂ. ಪಾಟೀಲ, ಅಶೋಕ ಪಾಟೀಲ, ಸಿ.ಆರ್. ರೂಡಗಿ, ನಾಗಪ್ಪ ಅಷ್ಟಗಿ, ವಿ.ಎಸ್. ಪಾಟೀಲ, ಬಿ.ವಿ. ಹಿರೇಮಠ, ಕೆ.ಎಸ್. ಚವ್ಹಾಣ, ಜಿ.ಪಿ. ಪ್ರಕಾಶ, ಫರ್ನಾಂಡಿಸ್, ಎಂ.ಎಸ್. ನಾಡಗೌಡರ, ಬಾಗಲಕೋಟ, ವಿಜಯಪುರ, ಕಾರವಾರ, ಧಾರವಾಡ, ಹಾವೇರಿ ಸೇರಿ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.