ಬ್ರಿಟನ್ : ಇದು ಜನಾಂಗವಾದಿ ದೇಶ ಎಂದು ಯಾರೂ ಹೇಳಲು ಬಿಡಬೇಡಿ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು `ಇದು ಜನಾಂಗವಾದಿ ದೇಶ ಎಂದು ಯಾರೂ ಹೇಳಲು ಬಿಡಬೇಡಿ. ಇದು ಖಂಡಿತಾ ಅಲ್ಲ. ನನ್ನ ಕತೆಯೇ ಬ್ರಿಟನ್ನ ಕತೆಯಾಗಿದೆ. ನನ್ನನ್ನು ಪ್ರಧಾನಿಯಾಗಿ ಉನ್ನತ ಸ್ಥಾನಕ್ಕೇರಿಸಿದಂತೆಯೇ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೆವರ್ಮನ್, ಇಂಧನ ಕಾರ್ಯದರ್ಶಿ ಕ್ಲ್ಯಾರಾ ಕುಟಿನ್ಹೊ ಕೂಡಾ ಭಾರತೀಯ ಮೂಲದವರು ಎಂಬುದು ಗಮನಾರ್ಹ’ ಎಂದರು.
ಬ್ರಿಟನ್ ಜನಾಂಗವಾದಿ ದೇಶವಲ್ಲ. ಇದಕ್ಕೆ ತನ್ನನ್ನು ಪ್ರಥಮ ಭಾರತೀಯ ಮೂಲದ ಪ್ರಧಾನಿಯಾಗಿ ಉನ್ನತ ಪದವಿಗೇರಿಸಿದ್ದು ಸ್ಪಷ್ಟ ನಿದರ್ಶನವಾಗಿದೆ. ಬ್ರಿಟನ್ ನ ಪ್ರಪ್ರಥಮ ಭಾರತೀಯ ಮೂಲದ ಪ್ರಧಾನಿ ಎಂದು ಹೇಳಿಕೊಳ್ಳಲು ತನಗೆ ಹೆಮ್ಮೆಯೆನಿಸುತ್ತದೆ. ಚರ್ಮದ ಬಣ್ಣ ಬ್ರಿಟನ್ ನಲ್ಲಿ ಯಾವತ್ತೂ ಸಮಸ್ಯೆಯಾಗಿಲ್ಲ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
2015ರಲ್ಲಿ ನಾರ್ಥ್ಯಾರ್ಕ್ಶೈರ್ನ ರಿಚ್ಮಂಡ್ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದಾಗ ಅಮೆರಿಕದ ಪತ್ರಿಕೆಯೊಂದು ` ಜನಾಂಗೀಯವಾಗಿ ತಪ್ಪು ಆಯ್ಕೆ ಮಾಡಿರುವುದು ಕನ್ಸರ್ವೇಟಿವ್ ಪಕ್ಷದ ಭದ್ರಕೋಟೆ ಕೈತಪ್ಪುವ ಅಪಾಯಕ್ಕೆ ಕಾರಣವಾಗಬಹುದು’ ಎಂದು ವರದಿ ಮಾಡಿತ್ತು. ಆದರೆ ಕ್ಷೇತ್ರದ ಜನರು ನನ್ನ ಬಣ್ಣದ ಬಗ್ಗೆಯಲ್ಲ, ನನ್ನ ಗುಣದ ಬಗ್ಗೆ ಆಸಕ್ತಿ ತೋರಿದರು’ ಎಂದು ಸುನಕ್ ಹೇಳಿದ್ದಾರೆ. ರಿಚ್ಮಂಡ್ ಕ್ಷೇತ್ರದಿಂದ ಸುನಕ್ 2015ರಿಂದ ನಿರಂತರ ಗೆಲುವು ಸಾಧಿಸಿದ್ದಾರೆ.