ಯಾದಗಿರಿ: ಇಲ್ಲಿನ ನಗರ ಠಾಣೆ ಪಿಎಸ್ಐ ಪರಶುರಾಮ್ ಅವರ ನಿಗೂಢ ಸಾವಿನ ಪ್ರಕರಣದ ತನಿಖೆ ಹೊಣೆ ಹೊತ್ತಿರುವ ಸಿಐಡಿ ತನಿಖಾ ತಂಡ ಯಾದಗಿರಿಗೆ ಭಾನುವಾರ ಭೇಟಿ ನೀಡಿದೆ. ಪರಶುರಾಮ್ ಸಾವು ಪ್ರರಕರಣ ಸಂಬಂಧ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮತ್ತು ಅವರ ಪುತ್ರ ಪಂಪಣ್ಣಗೌಡ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬೆನ್ನಲ್ಲೇ ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿತ್ತು. ಸರ್ಕಾರ ಆದೇಶಿಸಿದ ಮರುದಿನವೇ ಡಿವೈಎಸ್ಪಿ ಪುನೀತ ನೇತೃತ್ವದ ಸಿಐಡಿ ತನಿಖಾ ತಂಡ ಯಾದಗಿರಿಗೆ ಭೇಟಿ ಕೊಟ್ಟಿದೆ.
ಯಾದಗಿರಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಸಿಐಡಿ ತಂಡ ಈಗಾಗಲೇ ಡಿವೈಎಸ್ಪಿ ಕಚೇರಿಯಲ್ಲಿ ಕೇಸ್ಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದೆ. ಇಂದೇ ಪೊಲೀಸರಿಂದ ಕೇಸ್ ಫೈಲ್ ಪಡೆದು, ತನಿಖೆ ಚುರುಕುಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಶಾಸಕ ಚನ್ನಾರೆಡ್ಡಿ, ಪಂಪಣ್ಣಗೌಡಗೆ ಬಂಧನ ನಾಪತ್ತೆ:
ಇನ್ನೂ ಪರಶುರಾಮ್ ನಿಗೂಢ ಸಾವು ಪ್ರಕರಣದಲ್ಲಿ ಶಾಸಕ ಚೆನ್ನಾರೆಡ್ಡಿ ಹಾಗು ಪುತ್ರ ಪಂಪನಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಬಂಧನದ ಭೀತಿಗೆ ಒಳಗಾಗಿರುವ ಶಾಸಕ ಹಾಗೂ ಪುತ್ರ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಚೆನ್ನಾರೆಡ್ಡಿ ಹಾಗು ಪುತ್ರ ಪಂಪನಗೌಡ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಯಾರ ಸಂಪರ್ಕದಲ್ಲಿಯೂ ಇಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.