ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತಂತೆ ಕುಲಂಕೂಶವಾಗಿ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವ ಏಕಸದಸ್ಯ ಆಯೋಗ ರಚಿಸಿತ್ತು.
ಕಳೆದ ಜುಲೈ 21 ರಂದು ಅಕ್ರಮ ನಡೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾ.ವೀರಪ್ಪ ನೇತೃತ್ವದ ತಂಡ ಇಂದು ಸಿಐಡಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್ ಗೆ ಭೇಟಿ ನೀಡಿ ಪರಿಶೀಲಿಸಿದ್ರು.
ಸಿಐಡಿ ಡಿಜಿ ಎಂ.ಎಂ.ಸಲೀಂ ಹಾಗೂ ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾ.ಬಿ.ವೀರಪ್ಪ ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮ ಸಂಬಂಧ ರಾಜ್ಯ ಸರ್ಕಾರ ಹಗರಣವನ್ನ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಆರೋಪಗಳು ಕೇಳಿ ಬಂದಿತ್ತು.
ಈ ಹಿನ್ನಲೆ ನಮ್ಮಆಯೋಗ ಇಂದು ಸಿಐಡಿ ಸ್ಟ್ರಾಂಗ್ ರೂಮ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಈಗಾಗಲೇ 28 ಜನರ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ ತಿಂಗಳ 15 ರಿಂದ ಸ್ಟ್ರಾಂಗ್ ರೂಮ್ ಗೆ ಬಲವಂತವಾಗಿ ನುಗ್ಗಿದ ಆರೋಪಿತರ ಹೇಳಿಕೆ ಹಾಗೂ ಸಾಕ್ಷ್ಯಾಧಾರ ಕಲೆ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ.
ಬಹುತೇಕ ತಿಂಗಳ್ಯಾಂತಕ್ಕೆ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಸ್ಟ್ರಾಂಗ್ ರೂಮ್ ಭೇಟಿ ಮಾಡಿ ಪರಿಶೀಲಿಸಲಾಗಿದ್ದು ಇನ್ನಷ್ಟು ಸುಧಾರಣೆಯಾಗಬೇಕಿದೆ. ಇರುವ ಲೋಪದೋಷಗಳ ಬಗ್ಗೆ ಸರಿಪಡಿಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗುವುದು.
ದೇಶ ಕಾಯುವ ಸೈನಿಕ ರೀತಿಯಲ್ಲಿ ಪೊಲೀಸರು ಸಹ ಕಾರ್ಯನಿರ್ವಹಿಸುತ್ತಾರೆ.ಪೊಲೀಸ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮವಾದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸದಂತೆ ಆಗಲಿದೆ. ಭವಿಷ್ಯದಲ್ಲಿ ಅಕ್ರಮಗಳು ಆಗದಂತೆ ತಡೆಯಬೇಕಿದೆ ಎಂದರು.