ಯಾದಗಿರಿ:- ನಿನ್ನೆ ಬೀಳ್ಕೊಡುಗೆ ಪಡೆದ ಪಿಎಸ್ಐ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ ಮನಕಲಕುವ ಘಟನೆ ಜರುಗಿದೆ.
ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ್ ಸಾವನ್ನಪ್ಪಿದ PSI. ಪರಶುರಾಮ್ ಇತ್ತೀಚೆಗೆ ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು.
ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಪೊಲೀಸ್ ಕ್ವಾರ್ಟರ್ಸ್ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಈ ಸಾವು ಅನುಮಾನ ಮೂಡಿಸಿದ್ದು, ಕುಟುಂಬಸ್ಥರನ್ನು ಶಾಕ್ಗೆ ದೂಡಿದೆ. ಪರಶುರಾಮ್ ಅವರ ಪತ್ನಿ ಗರ್ಭಿಣಿಯಾಗಿದ್ದು ತವರಿಗೆ ತೆರಳಿದ್ದವರು ಮರಳಿದ್ದಾರೆ. ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ದಲಿತ ಸಂಘಟನೆಗಳು ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ.
ಈ ಕುರಿತು ಪರಶುರಾಮ್ ಅವರ ಪತ್ನಿ ಶ್ವೇತಾ ದೂರು ನೀಡಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಉಳಿದುಕೊಳ್ಳಲು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ಅವರು 30 ಲಕ್ಷ ರೂ. ಹಣ ಲಂಚ ನೀಡುವಂತೆ ಒತ್ತಾಯಿಸಿದ್ದರು. ಕಳೆದ ಏಳು ತಿಂಗಳ ಹಿಂದಷ್ಟೇ 30 ಲಕ್ಷ ರೂ. ಹಣ ನೀಡಿ ನಗರ ಠಾಣೆಗೆ ಪೋಸ್ಟಿಂಗ್ ಪಡೆದುಕೊಂಡಿದ್ದರು. ಇದರಿಂದ ಸಾಲದ ಸುಳಿಗೆ ಸಿಲುಕಿದ್ದರು. ಇದೀಗ ಮತ್ತೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆ ಮಾಡಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದರು ಎಂದು ಶ್ವೇತಾ ಆರೋಪಿಸಿದ್ದಾರೆ