ಬೆಂಗಳೂರು: ಸ್ಮಶಾನ ಭೂಮಿಗಾಗಿ ಅರ್ಜಿ ಸಲ್ಲಿಸದ ಸಾರ್ವಜನಿಕರ ವಿರುದ್ಧ ಬೆಂಗಳೂರಿನ ಹೈಕೋರ್ಟ್ ಬೇಸರ ಹೊರ ಹಾಕಿದೆ. ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾ.ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ, ಜನರ ಧೋರಣೆ ವಿರುದ್ಧ ಅಸಮಾಧಾನ ಹೊರಹಾಕಿತು.
ಅರ್ಜಿ ವಿಚಾರಣೆ ವೇಳೆ ಸರ್ಕಾರಿ ವಕೀಲ ಕಿರಣ್ ಕುಮಾರ್, 2023ರ ಏ.19 ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಒದಗಿಸಿರುವ ಪತ್ರ ಒಳಗೊಂಡ ಮೆಮೋವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. 2023ರ ಏ.9 ರಂದು ಹೈಕೋರ್ಟ್ ಹೊರಡಿಸಿದ ಆದೇಶದಂತೆ ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ಗ್ರಾಮಕ್ಕೆ ಭೂಮಿ ಮಂಜೂರಾತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ತಿಳಿಸಿ ಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಆದರೆ, ಸಾರ್ವಜನಿಕ ಪ್ರಕಟಣೆ ಪ್ರಕಟಿಸಿದ ಹೊರತಾಗಿಯೂ ಇಡೀ ರಾಜ್ಯದ ಯಾವುದೇ ಭಾಗದಿಂದಲೂ ಯಾವೊಬ್ಬ ಗ್ರಾಮಸ್ಥನಿಂದಲೂ ಸ್ಮಶಾನಕ್ಕೆ ಭೂಮಿ ಮಂಜೂರಾತಿ ಕೋರಿ ಮನವಿ ಬಂದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಇದಕ್ಕೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಜನರಿಗೆ ಸ್ಮಶಾನಕ್ಕೆ ಭೂಮಿ ಸೇರಿ ಇತರೆ ಸೌಲಭ್ಯ ಪಡೆಯುವುದರ ಬಗ್ಗೆ ಜನರಿಗೆ ಆಸಕ್ತಿ ಇಲ್ಲ. ಚುನಾವಣೆ ವಿಚಾರವಾಗಿ ಹೆಚ್ಚಿನ ಗಮನ ಹರಿಸುತ್ತಾರೆ. ಚುನಾವಣೆ ಬಂತಲ್ಲ; ಹಣ ವಸೂಲಿ ಮಾಡುವ ಕುರಿತು ಯೋಚಿಸುತ್ತಿದ್ದಾರೆ. ಹಣ ಸ್ವೀಕರಿಸಿ ಮತ ಹಾಕಬೇಕಲ್ಲವೇ? ಅದುವೇ ಜನರಿಗೆ ಇಷ್ಟದ ವಿಷಯ. ಜನ ಹೀಗಿರುವಾಗ ನ್ಯಾಯಾಲಯ ಏನು ಮಾಡಲು ಸಾಧ್ಯ ಎಂದಿದೆ.