ನವದೆಹಲಿ: 2000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣವನ್ನು ಆರ್ಬಿಐ (Reserve Bank of India) ಘೋಷಿಸಿದ ನಾಲ್ಕು ತಿಂಗಳ ಬಳಿಕ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಅವಧಿ ಇಂದು ಕೊನೆಯಾಗಿದೆ. ಈ ಮೂಲಕ ಅ.1 ರಿಂದ ಅಂದರೆ ನಾಳೆಯಿಂದ 2000 ರೂ. ನೋಟುಗಳು ಮೌಲ್ಯವನ್ನು ಕಳೆದುಕೊಳ್ಳಲಿವೆ.
ಅಕ್ಟೋಬರ್ 8 ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ನೋಟುಗಳ ಠೇವಣಿ ಅಥವಾ ವಿನಿಮಯವನ್ನು ನಿಲ್ಲಿಸಲಾಗುತ್ತದೆ. ಆದರೂ 2,000 ರೂ. ನೋಟುಗಳು ಅಕ್ಟೋಬರ್ 7ರ ನಂತರವೂ ಕಾನೂನುಬದ್ಧವಾಗಿ ಮುಂದುವರಿಯುತ್ತದೆ. ಆದರೆ ಅವುಗಳನ್ನು ಆರ್ಬಿಐ ಕಚೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.
2000 ರೂ. ಮುಖಬೆಲೆಯ ನೋಟುಗಳನ್ನು ನವೆಂಬರ್ 2016 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ 1934ರ ಸೆಕ್ಷನ್ 24 (1) ಅಡಿಯಲ್ಲಿ ಪರಿಚಯಿಸಲಾಗಿತ್ತು. ಅದಕ್ಕೂ ಮೊದಲು ಚಲಾವಣೆಯಲ್ಲಿದ್ದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಈ ನೋಟನ್ನು ಬಿಡುಗಡೆ ಮಾಡಲಾಗಿತ್ತು. ಇತರ ಮುಖಬೆಲೆಯ ನೋಟುಗಳು ಪ್ರಸುತ್ತ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಈ ಹಿನ್ನಲೆಯಲ್ಲಿ ಆರ್ಬಿಐನ ಕ್ಲೀನ್ ನೋಟ್ ಪಾಲಿಸಿ ಅಡಿಯಲ್ಲಿ 2000 ರೂ. ನೋಟುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಈ ಹಿಂದೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌದರಿ ತಿಳಿಸಿದ್ದರು.