ಮಹದೇವಪುರ: ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಹಾಗೂ ಬಂಡೆ ಹೊಸೂರಿನಲ್ಲಿ ಬಿಬಿಎಂಪಿಯ ಘನ ತ್ಯಾಜ್ಯ ವಿಲೇವಾರಿ ಘಟಕದಿಂದ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಕುರಿತು ಸ್ಥಳೀಯರಿಂದ ದೂರು ಬಂದ ಹಿನ್ನೆಲೆ , ಶಾಸಕಿ ಮಂಜುಳಾ ಲಿಂಬಾವಳಿ , ಮಹದೇವಪುರ ಟಾಸ್ಕ್ ಫೋರ್ಸ್ ಅಧ್ಯಕ್ಷರು ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ , ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ತ್ಯಾಜ್ಯ ಘಟಕಗಳ ಪರಿವೀಕ್ಷಣೆ ನಡೆಸಿದರು.
ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಿಟ್ಟಗಾನಹಳ್ಳಿ ಹಾಗೂ ಬಂಡೆ ಹೊಸೂರು ಗ್ರಾಮಗಳ ಕಲ್ಲುಕ್ವಾರಿಗಳಲ್ಲಿ ಕಳೆದ ಹಲವು ವರ್ಷಗಳಿಂದ ಬಿಬಿಎಂಪಿ ಘನ ತ್ಯಾಜ್ಯ ವಿಲೇವಾರಿ ಮಾಡುತ್ತಿದೆ, ದಿನ ಕಳೆದಂತೆ ಲಕ್ಷಾಂತರ ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹಗೊಂಡಿದೆ, ತ್ಯಾಜ್ಯ ಮತ್ತು ಲಿಚ್ಚೇಡ್ ನೀರು ಶೇಖರಣೆಯಿಂದ ಸುತ್ತಮುತ್ತಲಿನ ಗ್ರಾಮಗಳ ನೀರು, ವಾತಾವರಣ ಸಂಪೂರ್ಣ ಕಲುಷಿತಗೊಂಡಿದ್ದು , ಶುದ್ಧ ಗಾಳಿಯು ಲಭಿಸಿದಂತಾ ಸ್ಥಿತಿ ಸೃಷ್ಟಿಯಾಗಿದೆ. ಈ ನಡುವೆ ಸಮಸ್ಯೆಗಳು ಮತ್ತಷ್ಟು ಬಿಗಾಡಾಸಿದ ಹಿನ್ನಲೆ ಸ್ಥಳೀಯರು ಶಾಸಕರಿಗೆ ದೂರನ್ನು ನೀಡಿದ್ದು , ಶಾಸಕಿ ಮಂಜುಳಾ ಲಿಂಬಾವಳಿ ಅವರು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರ ಸಮ್ಮುಖದಲ್ಲಿ ತ್ಯಾಜ್ಯ ಘಟಕಗಳ ಪರಿವೀಕ್ಷಣೆ ನಡೆಸಿದರು .
ಇನ್ನೂ ತ್ಯಾಜ್ಯ ವೈಜ್ಞಾನಿಕವಾಗಿ ಶೇಖರಣಾಗುತ್ತಿರುವ ಕಾರಣ ಅನೇಕ ರೋಗರುಜಿನಗಳಿಂದ ಜನ ತತ್ತರಿಸುವಂತಾಗಿದೆ, ನೀರಿನ ಮೂಲಗಳು ಕಲುಷಿತಗೊಂಡು ಪ್ರಾಣಿ,ಪಕ್ಷಿ ಸೇರಿ ಜೀವಸಂಕುಲಗಳು ಪರಿತಪಿಸುವ ಸ್ಥಿತಿಗೆ ಬಂದು ತಲುಪಿದೆ, ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಜನರು ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಇನ್ನಷ್ಟು ಸಮಸ್ಯೆ ಉಲ್ಬಣವಾಗುವ ಮುನ್ನ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಬಿಬಿಎಂಪಿ ಆಯುಕ್ತರು,ಸ್ಥಳಿಯ ಶಾಸಕರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ
ತುಷಾರ್ ಗಿರಿನಾಥ್ ಶೀಘ್ರವಾಗಿ ಬಿಬಿಎಂಪಿ ವತಿಯಿಂದ ಒಂದು ಎಂಎಲ್ಡಿ ಹಾಗೂ ಪಿಪಿಪಿ ವತಿಯಿಂದ ಒಂದು ಎಂಎಲ್ಡಿ ದ್ರವತ್ಯಾಜ್ಯ ಸಂಸ್ಕರಿಸುವ ಘಟಕಗಳನ್ನು ಸ್ಥಾಪಿಸಲಾಗುವುದು ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಬಿಬಿಎಂಪಿ ವತಿಯಿಂದ ಕುಡಿಯುವ ನೀರು ಮತ್ತು ಹೇಲ್ತ್ ಸೆಂಟರ್ ಗಳನ್ನ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ನಂತರ ಕಣ್ಣೂರು ಗ್ರಾ.ಪಂ.ಅಧ್ಯಕ್ಷ ಅಶೋಕ್ ಮಾತನಾಡಿ ಕಳೆದ ಹದಿನೈದು ವರ್ಷಗಳಿಂದ ಬೆಂಗಳೂರಿನ ಕಸವನ್ನ ತಂದು ನಮ್ಮ ಭಾಗದಲ್ಲಿ ಸುರಿಯುತ್ತಿರುವುದರಿಂದ ಜನ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.ಮತ್ತು ಘನ ತ್ಯಾಜ್ಯ ವಿಲೇವಾರಿ ಭೂಮಿಯಲ್ಲಿ ನೀರು ಕಲುಷಿತಗೊಂಡು ಕುಡುಯುವ ನೀರಿನ ಸಮಸ್ಯೆ ಉಂಟಾಗಿದೆ, ಬಿಬಿಎಂಪಿ ವಾಹನಗಳು ಸಂಚಾರಿಸುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಇದರ ಬಗ್ಗೆ ಆಯುಕ್ತರಿಗೆ ಮನವರಿಕೆ ಮಾಡಿಕೊಡಲಾಗಿದೆ.
ಮುಂದಿನ ದಿನಗಳಲ್ಲಿ ಇದಕ್ಕೆಲ್ಲಾ ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳದೇ ಇದ್ದಲ್ಲಿ ನಮ್ಮ ಪಂಚಾಯಿತಿ ಕಡೆಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್ , ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ,ಉಪಾಧ್ಯಕ್ಷೆ ಲಲಿತಾ ದೇವರಾಜ್, ಸದಸ್ಯರಾದ ಸುಂದರ್,ದೊಡ್ಡಣ್ಣ, ಸೇರಿದಂತೆ ಬಿಬಿಎಂಪಿ ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕದ ಅಧಿಕಾರಿಗಳು ಸೇರಿ ಮತ್ತಿತರರು ಇದ್ದರು .