ರಾಮನಗರ: ಜಾನುವಾರು ಸಾಗಾಟ ವೇಳೆ ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಪುನೀತ್ ಕೆರೆಹಳ್ಳಿ(Puneeth Kerehalli) ಸೇರಿದಂತೆ ಇತರೆ ನಾಲ್ಕು ಆರೋಪಿಗಳಿಗೆ 7 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ಕನಕಪುರ JMFC ನ್ಯಾಯಾಲಯ ಆದೇಶ ಹೊರಡಿಸಿದೆ. ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಿಂದೂಪರ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ನಾಲ್ವರು ಸಹಚರರನ್ನು ಇಂದು ಬೆಳಗ್ಗೆ ರಾಜಸ್ಥಾನದಿಂದ ರಾಮನಗರಕ್ಕೆ ಕರೆತಂದಿದ್ದು, ಬಳಿಕ ಪೊಲೀಸರು ಆರೋಪಿಗಳನ್ನು ಕನಕಪುರ ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು 7 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಘಟನೆ ಹಿನ್ನೆಲೆ
ಕನಕಪುರ ತಾಲೂಕಿನ ಸಾತನೂರು ಬಳಿ ಮಾ.31ರ ರಾತ್ರಿ ಮಂಡ್ಯದಿಂದ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹವವನ್ನು ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರು ತಡೆದಿದ್ದರು. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಂಡಿದ್ದರು. ಈ ವೇಳೆ ಕ್ಯಾಂಟರ್ನಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ಪರಾರಿಯಾಗಿದ್ದರೆ, ವಾಹನದಲ್ಲಿದ್ದ ಇದ್ರೀಷ್ ಪಾಷ (Idrish Pasha) ಎಂಬುವರ ಮೃತ ದೇಹ ಘಟನೆ ನಡೆದ 200 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಪುನೀತ್ ಕೆರೆಹಳ್ಳಿ ನೈತಿಕ ಪೊಲೀಸ್ ಗಿರಿ ಮಾಡಿದ್ದು ಇದ್ರಿಷ್ ಪಾಷಾ ಎಂಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ 3 ಎಫ್ಐಆರ್ ದಾಖಲಾಗಿತ್ತು. ಮೃತನ ಸಹೋದರನ ದೂರಿನಂತೆ ದೂರಿನಂತೆ ಪೊಲೀಸರು ಐಪಿಸಿ ಸೆಕ್ಷನ್ 341, 504, 506, 324, 302, 34ರ ಅಡಿ ಪ್ರಕರಣ ದಾಖಲಾಗಿತ್ತು.
ದೂರು ದಾಖಲಾಗುತ್ತಿದ್ದಂತೆಯೇ ಪುನೀತ್ ಕೆರೆಹಳ್ಳಿ ಹಾಗೂ ಇತರೆ ಆರೋಪಿಗಳು ನಾಪತ್ತೆಯಾಗಿದ್ದರು. ಸಾತನೂರು ಪೊಲೀಸರು ನಿರಂತರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬುಧವಾರ (ಏ.5) ರಾಜಸ್ಥಾನದಲ್ಲಿ ಬಂಧಿಸಿದ್ದರು. ಆರೋಪಿಗಳಾದ ಪುನೀತ್ ಕೆರೆಹಳ್ಳಿ(ಎ1), ಗೋಪಿ, ಪವನ್ ಕುಮಾರ್, ಪಿಲ್ಲಿಂಗ್ ಅಂಬಿಗರ್, ಸುರೇಶ್ ಕುಮಾರ್ ಆರೋಪಿಗಳು.