‘ಅಪ್ಪು ದೇವರ ಮಾಲೆ’ ಆಚರಣೆಯನ್ನು ಜಾರಿಗೆ ತರುವ ವಿಚಾರವನ್ನು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಇತ್ತೀಚೆಗೆ ಘೋಷಿಸಿದ್ದರು. ಅಯ್ಯಪ್ಪನ ಹೆಸರಲ್ಲಿ ಮಾಲೆ ಹಾಕಿಕೊಂಡಂತೆ ಪುನೀತ್ ರಾಜ್ಕುಮಾರ್ ಹೆಸರಲ್ಲಿ ಮಾಲೆ ಹಾಕಿಕೊಳ್ಳಲಾಗುತ್ತಿದೆ. ಮಾಲೆ ಹಾಕಿಕೊಂಡವರು ಹಲವು ಬಗೆಯ ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು. ಮಾರ್ಚ್1ರಿಂದ ಆರಂಭ ಆಗುವ ಈ ಆಚರಣೆ ಪುನೀತ್ ರಾಜ್ ಕುಮಾರ್ ಜನ್ಮದಿನವಾದ ಮಾರ್ಚ್ 17ಕ್ಕೆ ಕೊನೆಗೊಳ್ಳಲಿದೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದ್ದ, ನಟ ಪ್ರಥಮ್ ಈ ಬಗ್ಗೆ ಅಪಸ್ವರ ತೆಗೆದಿದ್ದಾರೆ. ‘ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ’ ಎಂದು ಮನವಿ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಅಕ್ಷರಶಃ ಆರಾಧಿಸುತ್ತಿದ್ದಾರೆ. ಅಪ್ಪು ನಿಧನ ಹೊಂದಿದ ನಂತರದಲ್ಲಿ ಅನೇಕರು ದೇವರ ಕೋಣೆಯಲ್ಲಿ ಅವರ ಫೋಟೋ ಇಟ್ಟು ಪೂಜೆ ಮಾಡಿದ ಉದಾಹರಣೆ ಇದೆ. ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೊಸಪೇಟೆಯಲ್ಲಿ ಪುನೀತ್ ರಾಜ್ಕುಮಾರ್ ಅವರ ಪ್ರತಿಮೆ ಇದೆ. ಹೊಸಪೇಟೆಯ ಅಪ್ಪು ಅಭಿಮಾನಿಗಳ ಸಂಘದವರು ಈ ಮಾಲೆ ಧರಿಸುತ್ತಿದ್ದಾರೆ. ಮಾರ್ಚ್ 1ರಿಂದ ಅಭಿಮಾನಿಗಳು ಮಾಲೆ ಹಾಕಬಹುದು. ಮಾರ್ಚ್ 17ರ ತನಕ ವ್ರತ ಆಚರಿಸಬೇಕು. ಮಾರ್ಚ್ 18ರಂದು ಪುನೀತ್ ರಾಜ್ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಬೇಕು. ಇದಕ್ಕೆ ಸಂಬಂಧಿಸಿದ ಕರಪತ್ರ ಒಂದು ವೈರಲ್ ಆಗಿತ್ತು. ಇದನ್ನು ಕೆಲವರು ವಿರೋಧಿಸಿದ್ದಾರೆ.